ಗಂಡನಿಗೆ ಸರ್ಕಾರಿ ಕೆಲಸ ಸಿಗಲೆಂದು, ಲವರ್​ ಜತೆ ಸೇರಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

murder
Published on

ಪಟನಾ: ಮಾವ ಮಾಡುವ ಸರ್ಕಾರಿ ಕೆಲಸ ಗಂಡನಿಗೆ ಸಿಗಬೇಕೆಂಬ ದುರಾಸೆಯಿಂದಾಗಿ ಹೆಂಡತಿ ತನ್ನ ಬಾಯ್​ಫ್ರೆಂಡ್​ ಜತೆ ಸೇರಿಕೊಂಡು ಮಾವನ ಕೊಲೆಗೆ ಸುಪಾರಿ ಕೊಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್​ ಚೌಧರಿ ಹೆಸರಿನ ವ್ಯಕ್ತಿಯನ್ನು ಮಾರ್ಚ್​ 24ರಂದು ಯಾರೋ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ದರು. ಎಸ್​ಐಟಿ ಕೂಡ ತನಿಖೆ ನಡೆಸಿದೆ. ಸತೀಶ್​ ಅವರ ಸೊಸೆ ಸಾಕ್ಷಿ ಕುಮಾರಿ ಮೇಲೆ ಅನುಮಾನ ಬಂದಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆಗ ಆಕೆ ತಾನು ಮಾಡಿದ ಮಾಸ್ಟರ್​ ಪ್ಲ್ಯಾನ್​ ಅನ್ನು ಬಾಯಿ ಬಿಟ್ಟಿದ್ದಾಳೆ.

ಮಾವನಿಗೆ ಸರ್ಕಾರಿ ಕೆಲಸವಿತ್ತು. ಆ ಕೆಲಸ ನನ್ನ ಗಂಡನದಾಗಬೇಕೆಂಬ ಆಸೆ ಇತ್ತು. ಅದಕ್ಕೇ ಅವರನ್ನು ಕೊಲೆ ಮಾಡಿಸುವ ಪ್ಲ್ಯಾನ್​ ಮಾಡಿದೆ. ನನ್ನ ಬಾಯ್​ಫ್ರೆಂಡ್​ ಸಹಾಯದಿಂದ ಸುಪಾರಿ ಕಿಲ್ಲರ್​ಗಳನ್ನು ಸಂಪರ್ಕಿಸಿ ಸುಪಾರಿ ಕೊಟ್ಟೆ. ಕೊಲೆಗೆ ಎರಡು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದೆ ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಎಲ್ಲವೂ ಪ್ಲ್ಯಾನ್​ ಪ್ರಕಾರವೇ ಆಗಿತ್ತು ಆದರೆ ಸುಪಾರಿ ಕಿಲ್ಲರ್​ಗಳು ಮಾಡಿದ ಸಣ್ಣ ಪುಟ್ಟ ತಪ್ಪಿನಿಂದ ನಾನು ಸಿಕ್ಕಿಹಾಕಿಕೊಳ್ಳಬೇಕಾಯಿತು ಎಂದು ಆಕೆ ಹೇಳಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net