

ವಯಾನಾಡು: ಕೇರಳದಲ್ಲಿ ಆರು ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಇನ್ನೊಂದೆಡೆ ಕೋಳಿಕ್ಕೋಡ್ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು, ಸುತ್ತಮುತ್ತಲಿನ ಕೋಳಿ ಫಾರ್ಮ್ಗಳನ್ನೂ ಮುಚ್ಚಲಾಗಿದೆ. ಅನೇಕ ಕೋಳಿಗಳನ್ನು ಕೊಂದು, ಸುಟ್ಟುಹಾಕಲಾಗಿದೆ ಎಂದೂ ವರದಿಯಾಗಿದೆ.
ಇದೆಲ್ಲದರ ಮಧ್ಯೆ ಇನ್ನೊಂದು ರೋಗ ಕೇರಳದ ವಯಾನಾಡಿಗೆ ಕಾಲಿಟ್ಟಿದ್ದು, ಮಹಿಳೆಯೋರ್ವರನ್ನು ಬಲಿಪಡೆದಿದೆ. 48 ವರ್ಷದ ಮಹಿಳೆ ಮೀನಾಕ್ಷಿ ಎಂಬುವರು ಮಂಗನ ಕಾಯಿಲೆ (ಕೆಎಫ್ಡಿ)ಯಿಂದ ಮೃತಪಟ್ಟಿದ್ದಾರೆ.
ಮೀನಾಕ್ಷಿ ಅವರಲ್ಲಿ ಮಂಗನ ಕಾಯಿಲೆ ಇರುವುದು ಮಾರ್ಚ್ 5ರಂದು ದೃಢಪಟ್ಟಿತ್ತು. ಅವರಿಗೆ ಕೋಳಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ವಯಾನಾಡಿನಲ್ಲಿ ಮೀನಾಕ್ಷಿ ಸೇರಿ ಒಟ್ಟು13 ಜನರಿಗೆ ಕೆಎಫ್ಡಿ ಸೋಂಕು ತಗುಲಿತ್ತು. ಒಂಭತ್ತು ಜನರಿಗೆ ಚಿಕಿತ್ಸೆ ಪೂರ್ಣಗೊಂಡಿದ್ದು ಅವರು ಗುಣಮುಖರಾಗುತ್ತಿದ್ದಾರೆ. ಇನ್ನುಳಿದ ನಾಲ್ವರು ಇನ್ನೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)