ಹತ್ರಾಸ್​​ ಮೃತ ಯುವತಿಯ ತಾಯಿ ಬಿಚ್ಚಿಟ್ಟ ಮತ್ತೊಂದು ಸತ್ಯ: ಯಾಕೆ ಸುಮ್ಮನಿದ್ದರು ಎಂಬ ತಿರುಗೇಟು

Hathras 4
Published on

ಹತ್ರಾಸ್​: ಇಲ್ಲಿ ನಡೆದ ಗ್ಯಾಂಗ್​ರೇಪ್​ಗೆ ಸಂಬಂಧಪಟ್ಟಂತೆ ದಿನಕ್ಕೊಂದು ಹೊಸ ವಿಷಯ ಬೆಳಕಿಗೆ ಬರುತ್ತಿದೆ.

ಇದೀಗ ಯುವತಿಯ ತಾಯಿ ಮೊದಲ ಬಾರಿಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಒಂದು ಸತ್ಯವನ್ನು ತಿಳಿಸಿದ್ದರು. ಕಳೆದ ನಾಲ್ಕು ತಿಂಗಳಿಂದಲೂ ಈ ನಾಲ್ವರು ನನ್ನ ಮಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದರು ಎಂದು ತಿಳಿಸಿದ್ದಾರೆ.

ನನ್ನ ಮಗಳು ಮನೆಗೆ ಬಂದು ಇದನ್ನು ಹೇಳಿಕೊಂಡಿದ್ದಳು. ಆದರೆ ನಾವೇ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಇಷ್ಟು ಭೀಕರ ಪರಿಸ್ಥಿತಿ ಎದುರಾಗುತ್ತದೆ..ಅವಳ ಜೀವವೇ ಹೋಗುವ ಮಟ್ಟಕ್ಕೆ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಈಗ ಗೋಳಾಡಿದ್ದಾರೆ.

ಅದರಲ್ಲೂ ಸಂದೀಪ್​ ಮತ್ತು ಲವ್​ಕುಶ್​ ಇಬ್ಬರೂ ನನ್ನ ಮಗಳನ್ನು ಹಲವು ಬಾರಿ ಬೆನ್ನಟ್ಟಿ ಬಂದಿದ್ದರಂತೆ. ಹಾಗೇ ಕೈ ಅಡ್ಡ ಇಟ್ಟು ಮುಂದೆ ಹೋಗದಂತೆ ತಡೆದಿದ್ದರಂತೆ. ಮಗಳೇ ಹೇಳಿಕೊಂಡಿದ್ದಳು ಎಂದು ಅತ್ತಿದ್ದಾರೆ.

ಪದೇಪದೆ ಇವರಿಂದ ದೌರ್ಜನ್ಯಕ್ಕೀಡಾದ ನನ್ನ ಮಗಳು ಕೊನೆಕೊನೆಗೆ ಒಬ್ಬಳೇ ಮನೆಯಿಂದ ಹೊರಹೋಗಲು ಹಿಂದೇಟು ಹಾಕುತ್ತಿದ್ದಳು. ಒಂದು ಸೋಪು ಬೇಕೆಂದರೂ ಅತ್ತಿಗೆಯನ್ನು ಕರೆದುಕೊಂಡೇ ಹೋಗುತ್ತಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರಗಳು ನಿಲ್ಲಬೇಕಾದ್ರೆ ಹೀಗೆ ಮಾಡಿ: ಸಲಹೆ ನೀಡಿ ವಿವಾದ ಸೃಷ್ಟಿಸಿದ ಬಿಜೆಪಿ ಶಾಸಕ!

ಹಾಗೇ ಒಂದು ದಿನ ಅತ್ತಿಗೆಯ ಜತೆಯಲ್ಲಿದ್ದಾಗಲೇ ಆಕೆಗೆ ಚುಡಾಯಿಸಿದ್ದರು. ಆಗ ಅವಳ ಅತ್ತಿಗೆ ಆರೋಪಿಗಳನ್ನು ಹೆದರಿಸಿ, ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟಾದರೂ ಅವರ ಕಿರುಕುಳ ನಿಂತಿರಲಿಲ್ಲ ಎಂದೂ ಹೇಳಿದ್ದಾರೆ.

ಯುವತಿಯ ಕುಟುಂಬ ಹೀಗೆ ಆರೋಪ ಮಾಡುತ್ತಿದ್ದಂತೆ, ಆರೋಪಿಗಳಾದ ಸಂದೀಪ್​ ಮತ್ತು ಲವ್​ಕುಶ್​ ಕುಟುಂಬದವರು ಪ್ರತಿಕ್ರಿಯೆ ನೀಡಿದ್ದಾರೆ. ಯುವತಿಯ ಮನೆಯವರು ಯಾವತ್ತೂ ಈ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿರಲಿಲ್ಲ. ನಮಗಾದರೂ ಹೇಳಬಹುದಿತ್ತು. ಆದರೆ ಎಂದಿಗೂ ಹೇಳಲಿಲ್ಲ. ಇವೆಲ್ಲ ಸುಳ್ಳು ಆರೋಪಗಳು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net