

ಬೆಂಗಳೂರು: ಸಾರ್ವಜನಿಕ ಕೆಲಸಗಳಿಗೆ ಟೆಂಡರ್ ಅಥವಾ ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆ (ಆರ್ಬಿಟ್ರೇಷನ್)ಗೆ ಅವಕಾಶವಿದ್ದ ನಿಬಂಧನೆಯನ್ನು ವಾಪಸ್ ಪಡೆಯಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಸುತ್ತೋಲೆ (ಸಾಮಾನ್ಯ ನಿಬಂಧನೆಗಳ ಕಾಯ್ದೆ 1897, ಉಪಬಂಧ 21, ಸುತ್ತೋಲೆ ಸಂಖ್ಯೆ ಲಾ 273 ಎಲ್‌ಎಸಿ 2012(ಪಿ) ದಿನಾಂಕ: 10-1-2014)ಯನ್ನು ನ.16ರಿಂದ ಅನ್ವಯಿಸಿ ಹಿಂಪಡೆದಿದ್ದು, ಇನ್ನು ಮುಂದೆ ಏನೇ ತಗಾದೆಗಳಿದ್ದರೂ ವಾಣಿಜ್ಯಿಕ ನ್ಯಾಯಾಲಯಗಳಿಗೆ ಹೋಗಬಹುದಾಗಿದೆ.
ಮಧ್ಯಸ್ಥಿಕೆಗೆ ಅವಕಾಶ ಕಲ್ಪಿಸುವ ನಿಬಂಧನೆಯನ್ನು ಪೂರ್ಣ ರದ್ದುಪಡಿಸಿಲ್ಲ. ಅಗತ್ಯವೆನಿಸಿದರೆ ಕಾನೂನು ಇಲಾಖೆ ಪರಿಶೀಲಿಸಿ ಮಧ್ಯಸ್ಥಿಕೆ ಅವಕಾಶವಿರುವ ನಿಬಂಧನೆ ಬಳಕೆಗೆ ಅನುವು ಮಾಡಿಕೊಡಲಿದೆ ಎಂದರು.
ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಕ್ಕೂ ಅವಕಾಶವಿದ್ದಿಲ್ಲ. ಗುತ್ತಿಗೆ ಪಡೆದ ಕಾಮಗಾರಿಗಳಲ್ಲಿ ಅನಗತ್ಯ ವಿಳಂಬ, ಅನನುಕೂಲತೆ, ಸರ್ಕಾರಕ್ಕೆ ದುಬಾರಿ ಗಮನಿಸಿ ಈ ನಿಬಂಧನೆ ತೆಗೆದು ಹಾಕಲಾಗಿದೆ ಎಂದು ಸಮರ್ಥಿಸಿಕೊಂಡರು.
ಟೆಂಡರ್ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ನ್ಯೂನತೆ ಹಿಡಿದುಕೊಂಡು ಮಧ್ಯಸ್ಥಿಕೆ ಅವಕಾಶವನ್ನು ಗುತ್ತಿಗೆ ಸಂಸ್ಥೆ/ ವ್ಯಕ್ತಿ ಬಳಸಿಕೊಳ್ಳುತ್ತಿದ್ದಾರೆ. ರಾಜಿ ಸಂಧಾನದ ಹೆಸರಿನಲ್ಲಿ ಸರ್ಕಾರಕ್ಕೆ ಭಾರಿ ಹೊರೆಯಾದ ನೂರಾರು ಪ್ರಕರಣಗಳಿವೆ ಎಂದರು.
ಪತ್ರಕರ್ತರ ಪದೇ ಪದೆ ಪ್ರಶ್ನಿಸಿದ ಬಳಿಕ ಪೌಷ್ಠಿಕ ಆಹಾರ ಪೂರೈಕೆ ಗುತ್ತಿಗೆ ಸಂಬಂಧಿತ ಕ್ರಿಷ್ಟಿ ಪ್ರಕರಣ ಉದಾಹರಿಸಿದರು. ಈ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್‌ವರೆಗೆ ಹೋಗಿದ್ದರಿಂದ ಸರ್ಕಾರಕ್ಕೆ 60 ಕೋಟಿ ರೂ. ಉಳಿಯಿತು ಎಂದು ವಿವರಿಸಿದರು
ನಿರ್ದಿಷ್ಟವಾಗಿ ಇದೊಂದೇ ಅಲ್ಲ, ಇಂತಹ ನೂರಾರು ಪ್ರಕರಣಗಳಿವೆ. ನಿಬಂಧನೆ ವಾಪಸ್ ಪಡೆದ ಕಾರಣ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸರ್ಕಾರಕ್ಕೆ ಆರ್ಥಿಕ ಹೊರೆ ತಗ್ಗಲಿದ್ದು, ಮತ್ತು ವ್ಯವಸ್ಥೆ ಕತ್ತು ಹಿಚುಕುವುದೂ ತಪ್ಪಲಿದೆ ಎಂದು ಎಚ್.ಕೆ.ಪಾಟೀಲ ಹೇಳಿದರು.
ಕೋರ್ಟ್‌ಗಳ ಆದೇಶ, ಸೂಚನೆಗಳ ಪಾಲನೆಯಲ್ಲಿ ಮೇಲ್ಮಟ್ಟದ ವ್ಯವಸ್ಥೆ, ಅಧಿಕಾರಿಗಳು ಸ್ಪಂದನೆಶೀಲರಾಗಬೇಕು. ಆದೇಶ ಪಾಲನೆ ಮೂಲಕ ಗೌರವಿಸುವಂತಹ ಕಾರ್ಯತತ್ಪರತೆ ರೂಢಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಗಡುವು ವಿಧಿಸುವ ನಿರ್ಣಯವೊಂದನ್ನು ಇಲಾಖೆ ಕೈಗೊಂಡಿದೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.
ಕಳೆದ 10 ವರ್ಷಗಳಿಂದ ಅಪರಾಧಿಕ ನಿಂದನೆ ಪ್ರಕರಣ (ಕ್ರಿಮಿನಲ್ ಕಂಟೆಪ್ಟ್ ಕೇಸ್)ಗಳು 1,006 ಬಾಕಿಯಿವೆ. ಇಂತಹ ದಾವೆಗಳು ಏರುವುದು ಒಳ್ಳೆಯ ಲಕ್ಷಣವಲ್ಲವೆಂಬ ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಇಲಾಖೆ, ಅಡ್ವೋಕೇಟರ್ ಜನರಲ್, ಕಾನೂನು ಕೋಶ ಜಂಟಿಯಾಗಿ ನಡೆಸಿದ ಕಾರ್ಯಾಗಾರದಲ್ಲಿ ಬಾಕಿಯಿರುವ 1,006 ಪ್ರಕರಣಗಳಲ್ಲಿ ಡಿಸೆಂಬರ್‌ನೊಳಗೆ ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಮಾರ್ಚ್ ಅಂತ್ಯದೊಳಗೆ ಈ ಪ್ರಕರಣಗಳು ಎರಡಂಕಿ (99 ಆಸುಪಾಸು)ಗೆ ಇಳಿಸಬೇಕು ಎಂದು ನಿರ್ಣಯಿಸಲಾಗಿದೆ.
ಆಡಳಿತ, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಕೋರ್ಟ್‌ಗಳು ನೀಡುವ ಆದೇಶ, ಸೂಚನೆ ಅಥವಾ ತೀರ್ಪುಗಳನ್ನು ಅಧಿಕಾರಿಗಳು, ಮೇಲ್ಮಟ್ಟದಲ್ಲಿ ಸರಿಯಾಗಿ ಪಾಲನೆ ಮಾಡದ ಕಾರಣ ನಿಂದನೆ ಪ್ರಕರಣಗಳು 2,500ಕ್ಕೆ ಹೋದದ್ದು, 1006ಕ್ಕಿಳಿದಿದೆ.
ಈ ಪ್ರಕರಣಗಳ ಸಂಖ್ಯೆ ಏರಿಳಿತವಾಗುತ್ತಲಿದೆ. ಇದು, ಸರಿಯಾದ ನಡವಳಿಕೆಯಲ್ಲವೆಂದು ಡೆಡ್ ಲೈನ್ ನಿಗದಿ ಮಾಡಲಾಗಿದೆ. ಕಂಟೆಪ್ಟ್ ಕೇಸ್‌ಗಳನ್ನು ಎರಡಂಕಿಗೆ ಇಳಿಸಬೇಕು ಎಂಬ ಸೂಚನೆ ನೀಡಲಾಗಿದೆ ಎಂದರು.
ಎರಡಂಕಿ ಪ್ರಕರಣಗಳಿರುವ ಇಲಾಖೆಗಳು: ನ್ಯಾಯಾಂಗ ನಿಂದನೆ ಬಾಕಿ ಪ್ರಕರಣಗಳಲ್ಲಿ ಎರಡಂಕಿ (100ರೊಳಗೆ) ಆಸುಪಾಸಿನಲ್ಲಿರುವ ಇಲಾಖೆಗಳ ಪಟ್ಟಿಯಲ್ಲಿ 10ಕ್ಕೂ ಹೆಚ್ಚಿವೆ. ಈ ಪೈಕಿ ಮುಖ್ಯವಾಗಿ ಕಂದಾಯ, ನಗರಾಭಿವೃದ್ಧಿ, ಉನ್ನತಶಿಕ್ಷಣ, ಶಾಲಾ ಶಿಕ್ಷಣ, ಗೃಹ, ಆರೋಗ್ಯ ಇಲಾಖೆಗಳಿವೆ.
ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ವೈದ್ಯಕೀಯ ಶಿಕ್ಷಣ, ವಾಣಿಜ್ಯ ಹಾಗೂ ಕೈಗಾರಿಕೆ ಮತ್ತು ಗಣಿ, ಸಹಕಾರ ಇಲಾಖೆಗಳಿಗೆ ಸೇರಿವೆ ಎಂದು ಎಚ್.ಕೆ.ಪಾಟೀಲ ವಿವರಿಸಿದರು.