

ಹರಿಯಾಣ: ವಂಚನೆ ಮತ್ತು ಇತರ ಅಪರಾಧಗಳಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬ ಪೊಲೀಸರ ಕಸ್ಟಡಿಯಲ್ಲಿದ್ದು, ವಿಚಾರಣೆಗೆ ಎಂದು ನ್ಯಾಯಾಲಕ್ಕೆ ಕರೆತಂದ ವೇಳೆ ಹೆಂಡತಿಯ ಸಹಾಯದಿಂದ ಅಧಿಕಾರಿಗಳ ಕಣ್ತಪ್ಪಿಸಿ, ಸ್ಥಳದಿಂದ ಪರಾರಿಯಾದ ಘಟಟನೆ ಹರಿಯಾಣದಲ್ಲಿ ಪಲ್ವಾಲ್‌ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಯೋಜನೆ ವೇಗ ಪಡೆಯಲಿ; ನೀರಿನ ಸಮಸ್ಯೆ ನಿವಾರಣೆಯಾಗಲಿ
ಆರೋಪಿಯನ್ನು ಅನಿಲ್ ಅಲಿಯಾಸ್ ಟಿಂಕಲ್ ಎಂದು ಗುರುತಿಸಲಾಗಿದ್ದು, ವಿಚಾರಣೆಗಾಗಿ ಹರಿಯಾಣದ ಪಲ್ವಾಲ್‌ನಲ್ಲಿರುವ ಸ್ಥಳೀಯ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಕಳೆದ ವರ್ಷ ಏಪ್ರಿಲ್ 16ರಂದು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ನನ್ನು ಪೊಲೀಸರು ಬಂಧಿಸಿದ್ದು, ಪ್ರಸ್ತುತ ಏಳು ವಿವಿಧ ಪ್ರಕರಣಗಳಲ್ಲಿ ಆರೋಪಿ ಎಂದು ಹೇಳಲಾಗಿದೆ.
ನ್ಯಾಯಾಲಯದ ವಿಚಾರಣೆ ಮುಗಿದ ಬಳಿಕ ಅನಿಲ್ ಮತ್ತು ಪೊಲೀಸ್ ಅಧಿಕಾರಿಗಳು ಪಲ್ವಾಲ್‌ನ ಹೊಡಾಲ್ ಪ್ರದೇಶವನ್ನು ತಲುಪಲು ವಾಹನ ಹತ್ತಿದ್ದಾರೆ. ಈ ವೇಳೆ ಸ್ಥಳಕ್ಕೆ ಸ್ಕೂಟರ್‌ನಲ್ಲಿ ಬಂದ ಅನಿಲ್ ಪತ್ನಿ ಹತ್ತಿರದ ಹೋಟೆಲ್‌ನಲ್ಲಿ ತನ್ನ ಪತಿಯೊಂದಿಗೆ ಖಾಸಗಿಯಾಗಿ ಮಾತನಾಡಬೇಕು ಅವಕಾಶ ಮಾಡಿಕೊಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾಳೆ. ಇದಕ್ಕೆ ಸಮ್ಮತಿ ಸೂಚಿಸಿದ ಮೂವರು ಅಧಿಕಾರಿಗಳು, ದಂಪತಿಗಳಿಗೆ ಸಮಯ ಕೊಟ್ಟು, ಹೊರಗೆ ಕಾಯುತ್ತಿದ್ದರು.
ಸುಮಾರು ಒಂದು ಗಂಟೆ ಕಾಲ ಹೋಟೆಲ್‌ನಲ್ಲಿ ಕಾಲ ಕಳೆದ ಅನಿಲ್ ಮತ್ತು ಆತನ ಪತ್ನಿ ಪೊಲೀಸರ ಕಣ್ತಪ್ಪಿಸಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ. ಇದನ್ನು ಗಮನಿಸಿದ ಅಧಿಕಾರಿಗಳು ಇಬ್ಬರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದ್ರೆ, ತಪ್ಪಿಸಿಕೊಳ್ಳುವಲ್ಲಿ ಕಿಡಿಗೇಡಿಗಳು ಯಶಸ್ವಿಯಾದರು. ಸದ್ಯ ಈ ಪ್ರಕರಣದಲ್ಲಿ ಹೆಡ್ ಕಾನ್ಸ್‌ಟೇಬಲ್ ಜ್ಞಾನ್ ಸಿಂಗ್, ಕಾನ್‌ಸ್ಟೆಬಲ್ ವಿವೇಕಾನಂದ ಮತ್ತು ಕಾನ್‌ಸ್ಟೆಬಲ್ ದಿಲೀಪ್ ಎಂದು ಗುರುತಿಸಲ್ಪಟ್ಟ ಮೂವರು ಪೊಲೀಸರನ್ನು ಇದೀಗ ಅಮಾನತುಗೊಳಿಸಲಾಗಿದೆ.
ಪಲಾಯನಕ್ಕೆ ಪ್ರತಿಕ್ರಿಯೆಯಾಗಿ ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಶೈಲೇಶ್ ಕುಮಾರ್ ಪಾಂಡೆ, ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಶಿಸ್ತಿನ ಕ್ರಮಕ್ಕೆ ಗುರಿಯಾಗುವಂತೆ ಮಾಡಿದ್ದಾರೆ,(ಏಜೆನ್ಸೀಸ್).