ಸಂಪಾದಕೀಯ: ಹಕ್ಕಿನ ಜತೆ ಹೊಣೆಯೂ ಇದೆ

PFI
Published on

ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಟನೆಗೆ ಮತ್ತೊಂದು ಚಾಟಿಯೇಟು ಬಿದ್ದಿದೆ. ಸೆ. 22ರಂದು ದೇಶದ ವಿವಿಧೆಡೆ ರಾಷ್ಟ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ, ಪಿಎಫ್​ಐ ಮೇಲೆ ನಡೆಸಿದ ದಾಳಿ ವಿರೋಧಿಸಿ ಮರುದಿನ ಸೆ. 23ರಂದು ಕೇರಳದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಹರತಾಳದಿಂದಾದ ನಷ್ಟ ತುಂಬಿಕೊಡಲು 5.20 ಕೋಟಿ ರೂಪಾಯಿ ಠೇವಣಿ ಇಡಬೇಕು; 2 ವಾರದೊಳಗೆ ಹಣ ತುಂಬದಿದ್ದಲ್ಲಿ ರಾಜ್ಯದಲ್ಲಿರುವ ಈ ಸಂಟನೆಯ ಹಾಗೂ ಅದರ ಪದಾಧಿಕಾರಿಗಳ ವೈಯಕ್ತಿಕ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕೆಂದು ಕೇರಳ ಹೈಕೋರ್ಟ್​ ಆದೇಶಿಸಿರುವುದು ಪ್ರತಿಭಟನೆಗಳನ್ನು ಕೈಗೊಂಡು, ಹಿಂಸಾಚಾರವಾಗಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡುವ ಸಂಟನೆಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಪಿಎಫ್​ಐ ಹಾಗೂ ಅದರ ರಾಜ್ಯ ಪ್ರಧಾನ ಕಾರ್ಯದರ್ಶಿ ಈ ಹರತಾಳದ ಹೊಣೆಗಾರರು ಎಂದಿರುವ ಕೇರಳ ಕೋರ್ಟ್​, ಇದರಿಂದಾದ ನಷ್ಟವನ್ನು ಕೇರಳ ರಸ್ತೆ ಸಾರಿಗೆ ಸಂಸ್ಥೆ ಅಂದಾಜು ಆಧರಿಸಿಯೇ ಠೇವಣಿ ಹಣ ನಿಗದಿಪಡಿಸಿದೆ.

ಈ ಹರತಾಳ ಕುರಿತು ವಿವಿಧ ಮ್ಯಾಜಿಸ್ಟ್ರೆಟ್​ ಹಾಗೂ ಸೆಷನ್ಸ್​ ಕೋರ್ಟ್​ಗಳಲ್ಲಿ ದಾಖಲಿಸಿರುವ ಪ್ರಕರಣಗಳಲ್ಲಿ ಪಿಎ್​ಐ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನು ಹೆಚ್ಚುವರಿ ಆರೋಪಿಯನ್ನಾಗಿ ಪರಿಗಣಿಸಬೇಕೆಂದು ಆದೇಶಿಸಿರುವುದು ಹಠಾತ್​ ಪ್ರತಿಭಟನೆ ಕೈಗೊಳ್ಳಲು ಕರೆ ನೀಡುವ ಸಂಟನೆಗಳ ಪದಾಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕೆಂಬ ಸಂದೇಶವನ್ನು ರವಾನಿಸಿದೆ.

ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ನಡೆಸಿ ಹಾನಿಯುಂಟು ಮಾಡುವುದನ್ನು ತಡೆಗಟ್ಟುವ ಉದ್ದೇಶವಿರುವ, "1984ರ ಸಾರ್ವಜನಿಕ ಆಸ್ತಿ ಹಾನಿ ತಡೆ (ಪಿಡಿಪಿಪಿ) ಕಾಯ್ದೆ' ಹಲ್ಲಿಲ್ಲದ ಹಾವಿನಂತಾಗಿದ್ದರೂ ಕೋರ್ಟ್​ಗಳು ಮಾತ್ರ ಈ ಕುರಿತಂತೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಸಂಟನೆಗಳು ಕರೆ ನೀಡುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ನಷ್ಟ ಉಂಟಾದರೆ, ಅದಕ್ಕೆ ಆಯಾ ಸಂಟನೆಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಸುಪ್ರೀಂ ಕೋರ್ಟ್​ ಅನೇಕ ಪ್ರಕರಣಗಳಲ್ಲಿ ಸೂಚನೆ ನೀಡುತ್ತಲೇ ಬಂದಿದೆ.

2007ರಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಜರುಗಿ ಸಾರ್ವಜನಿಕ ಆಸ್ತಿಗಳಿಗೆ ನಷ್ಟವಾದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಕ್ರಮ ಕೈಗೊಂಡ ಸುಪ್ರೀಂ ಕೋರ್ಟ್​, ಈ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲು ಸಮಿತಿಯೊಂದನ್ನು ರಚಿಸಿತು. ಪ್ರತಿಭಟನೆ ನಡೆಸಿ ಹಿಂಸಾಚಾರಕ್ಕೆ ಕಾರಣವಾಗುವ ಸಂಟನೆಗಳ ನಾಯಕರನ್ನು ಅಪರಾಧಕ್ಕೆ ಕುಮ್ಮಕ್ಕು ನೀಡಿದ ತಪ್ಪಿತಸ್ಥರನ್ನಾಗಿಸಲು ಪಿಡಿಪಿಪಿ ಕಾಯ್ದೆಗೆ ತಿದ್ದುಪಡಿ ತರಬೇಕು; ಸಾರ್ವಜನಿಕ ಆಸ್ತಿಗಳಿಗೆ ನಷ್ಟವಾಗುವ ಸಂದರ್ಭಗಳನ್ನು ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಬೇಕು; ಆಸ್ತಿಗೆ ಆಗುವ ನಷ್ಟವನ್ನು ಕೋರ್ಟ್​ಗಳು ಇಲ್ಲವೇ ವಿಶೇಷ ಪ್ರಕ್ರಿಯೆಯ ಮೂಲಕ ಅಂದಾಜು ಮಾಡಬೇಕು ಎಂಬ ಸಲಹೆಗಳನ್ನು ಸಮಿತಿ ನೀಡಿರುವುದನ್ನು ಸುಪ್ರೀಂ ಕೋರ್ಟ್​ ಒಪ್ಪಿಕೊಂಡಿದೆ. ಇದರನುಸಾರವೇ ಈಗ ಕೇರಳ ಹೈಕೋರ್ಟ್​ ಆದೇಶ ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಹಕ್ಕು. ಆದರೆ ಅದರ ಜತೆಗೆ, ಕಾನೂನು ಸುವ್ಯವಸ್ಥೆಗೆ ತೊಂದರೆ ಆಗದಂತೆ, ಆಸ್ತಿಪಾಸ್ತಿಗೆ ಹಾನಿ ಆಗದಂತೆ ನೋಡಿಕೊಳ್ಳುವ ಹೊಣೆಯೂ ಇದೆ ಎಂಬುದನ್ನು ಮರೆಯಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net