ನಿಜಕ್ಕೂ ಆತ್ಮಾಹುತಿ ಬಾಂಬ್​ ದಾಳಿಯೇ? ಒಬ್ಬರಲ್ಲ ಮೂವರು... ಐ20 ಕಾರಿನ ರಹಸ್ಯ ಮತ್ತಷ್ಟು ಬಯಲು! Delhi Blast

Delhi Blast
Published on

ನವದೆಹಲಿ: ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ಸಂಬಂಧ ತನಿಖಾ ತಂಡಗಳು ತಮ್ಮ ತನಿಖೆಯನ್ನು ಚುರುಕುಗೊಳಿಸಿವೆ. ಇದರ ನಡುವೆ ಭದ್ರತಾ ತಂಡಗಳ ತಲೆಯಲ್ಲಿ ಒಂದು ಪ್ರಶ್ನೆ ಮೂಡಿದೆ. ಅದೇನೆಂದರೆ, ಇದು ನಿಜಕ್ಕೂ ಆತ್ಮಾಹುತಿ ಬಾಂಬ್​ ದಾಳಿಯೇ? ಎಂಬುದು. ಅಷ್ಟಕ್ಕೂ ಈ ಪ್ರಶ್ನೆ ಮೂಡಲು ಒಂದು ಕಾರಣವೂ ಇದೆ. ಅದೇನೆಂದರೆ, ಸ್ಫೋಟಗೊಳ್ಳುವ ಮುನ್ನ ಹ್ಯೂಂಡೈ ಐ20 ಕಾರಿನಲ್ಲಿ ಮೂರು ಮಂದಿ ಇದ್ದಿದ್ದು ಬೆಳಕಿಗೆ ಬಂದಿದೆ.

ಕಾರಿನ ಕೊನೆಯ ಮಾಲೀಕ ಪುಲ್ವಾಮ ಮೂಲದವನು. ಹೀಗಾಗಿ ದೆಹಲಿ ಪೊಲೀಸರು ನಡೆಸಿದ ಆರಂಭಿಕ ತನಿಖೆಯಲ್ಲಿ ಈ ಪ್ರಕರಣ ಫಿದಾಯಿನ್​ ದಾಳಿ ಅಥವಾ ಆತ್ಮಾಹುತಿ ಬಾಂಬ್​ ದಾಳಿಗೆ ಸಂಪರ್ಕ ಇರುವ ಸಾಧ್ಯತೆಯನ್ನು ಸೂಚಿಸಿತು. ಏಕೆಂದರೆ, 2019ರ ಫೆಬ್ರವರಿ 14ರಂದು 40 ಸೈನಿಕರನ್ನು ಬಲಿ ಪಡೆದ ಆತ್ಮಾಹುತಿ ದಾಳಿ ಇದೇ ಪುಲ್ವಾಮದಲ್ಲಿ ನಡೆದಿತ್ತು.

ಆದರೆ, ತನಿಖೆಯ ಬೇರು ಆಳವಾದಷ್ಟು ಬೇರೆ ಬೇರೆ ಪ್ರಶ್ನೆಗಳು ಮೂಡಲಾರಂಭಿಸಿವೆ. ಆತ್ಮಾಹುತಿ ಬಾಂಬ್​ ದಾಳಿಯ ಬಗ್ಗೆಯೇ ಸಂಶಯ ಮೂಡಿದೆ. ಏಕೆಂದರೆ, ಸ್ಫೋಟ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಕಾರಿನ ಒಳಗೆ ಮೂವರು ಇದ್ದರು ಎನ್ನಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳು ಕೂಡ ಇದಕ್ಕೆ ಪೂರಕವಾಗಿವೆ. ಅಲ್ಲದೆ, ವಿಧಿವಿಜ್ಞಾನದ ಸುಳಿವುಗಳು ಕೂಡ ಇದನ್ನೇ ಸೂಚಿಸುತ್ತಿವೆ. ಒಂದು ವೇಳೆ ವಾಹನದಲ್ಲಿ ಮೂರು ಮಂದಿ ಇದ್ದಿದ್ದರೆ ಅವರೆಲ್ಲರೂ ಸೂಸೈಡ್​ ಬಾಂಬರ್​ಗಳಾಗಿರುವ ಸಾಧ್ಯತೆ ತುಂಬಾ ಕಡಿಮೆ ಎಂಬ ವಾದವನ್ನು ತನಿಖಾಧಿಕಾರಿಗಳೇ ಮಾಡುತ್ತಿದ್ದಾರೆ. ಸಾಮಾನ್ಯವಾಗಿ, ಫಿದಾಯೀನ್ ಕಾರ್ಯಾಚರಣೆಯಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಭಾಗವಹಿಸುತ್ತಾರೆ ಎನ್ನುವುದು ಕೆಲವರ ವಾದ.

ಅಂದಹಾಗೆ, ತನಿಖಾಧಿಕಾರಿಗಳು ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಕಾರನ್ನು ಬೇರೆ ಟಾರ್ಗೆಟ್​ ಪ್ರದೇಶಕ್ಕೆ ಸಾಗಿಸುತ್ತಿದ್ದರಾ? ಅಥವಾ ಕೆಂಪು ಕೋಟೆಯ ಬಳಿ ಅಕಾಲಿಕವಾಗಿ ಕಾರಿನಲ್ಲಿದ್ದ ಸ್ಫೋಟಕಗಳು ಸ್ಫೋಟಗೊಂಡಿತಾ? ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಘಟನಾ ಸ್ಥಳದ ಸುತ್ತಲಿನ ಡೇಟಾವನ್ನು ಸಂಗ್ರಹಿಸಿ, ವಿಶ್ಲೇಷಣೆ ಮಾಡಲಾಗುತ್ತಿದೆ.

ಸದ್ಯದ ಒಂದು ಸಿದ್ಧಾಂತದ ಪ್ರಕಾರ, ಈ ಕೃತ್ಯ ಎಸಗಲು ಉದ್ದೇಶಪೂರ್ವಕವಾಗಿ ಸಾಧನವನ್ನು ಹೊತ್ತೊಯ್ದಿರಬಹುದು ಅಥವಾ ಅಂತಿಮ ಪ್ಲಾನ್​ಗೆ ಬಗ್ಗೆ ಗೊತ್ತಿಲ್ಲದೇ ಇರುವ ಒಂದು ದೊಡ್ಡ ಮಾಡ್ಯೂಲ್‌ನ ಭಾಗವಾಗಿರಬಹುದು ಎನ್ನಲಾಗುತ್ತಿದೆ. ಹೀಗಾಗಿ ಈ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಸ್ಫೋಟ ನಡೆದ ಸ್ಥಳವೂ ಕೆಂಪು ಕೋಟೆಗೆ ತುಂಬಾ ಹತ್ತಿರದಲ್ಲೇ ಇದೆ. ಅಲ್ಲದೆ, ಅದು ಅತ್ಯಂತ ಜನನಿಬಿಡಿದ ಪ್ರದೇಶ. ಹೀಗಾಗಿ ಈ ದಾಳಿಯನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂಬ ಅನುಮಾನಗಳೂ ಇವೆ. ಆದರೆ, ಕೆಂಪು ಕೋಟೆಯ ಪಾರ್ಕಿಂಗ್ ಪ್ರದೇಶದಿಂದ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು ಹ್ಯೂಂಡೈ ಐ20 ಕಾರು ಪ್ರವೇಶಿಸುತ್ತಿರುವುದು ಮತ್ತು ಕೆಲವು ಗಂಟೆಗಳ ಬಳಿಕ ನಿರ್ಗಮಿಸುತ್ತಿರುವ ದೃಶ್ಯವೂ ಇದೆ. ಹೀಗಾಗಿ ಇಲ್ಲಿ ಶಂಕಿತ ಸೂಸೈಡ್​ ಬಾಂಬರ್​ ಹಿಂಜರಿಕೆ ಕೂಡ ಗೊಂದಲ ಮೂಡಿಸಿದೆ.

ಇನ್ನು ವಾಹನದಲ್ಲಿದ್ದವರು ಸ್ಫೋಟಕಗಳನ್ನು ನಿರ್ವಹಿಸುತ್ತಿದ್ದಾಗಲೇ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿರಬಹುದು ಎಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಭದ್ರಾತಾ ಏಜೆನ್ಸಿಗಳು ಹೇಳುತ್ತಿವೆ. ಬಹುಶಃ ಬೇರೆಡೆ ದಾಳಿ ಮಾಡಲು ಅವರೆಲ್ಲ ಉದ್ದೇಶಿಸಿದ್ದರು. ಅವರ ಅಜಾಗರೂಕತೆಯಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು NIA ಮೂಲಗಳು ತಿಳಿಸಿವೆ. ಹೀಗಾಗಿ ಈ ಘಟನೆ ಆತ್ಮಾಹುತಿ ಬಾಂಬ್​ ದಾಳಿಯೋ ಅಥವಾ ಸ್ಫೋಟಕಗಳನ್ನು ಬೇರೆಡೆ ಸಾಗಿಸುವಾಗ ಅಚಾನಕ್ಕಾಗಿ ನಡೆದ ಸ್ಫೋಟವೋ ಎಂಬ ಪ್ರಶ್ನೆ ಹಾಗೇ ಉಳಿದಿದೆ. ಅಂದಹಾಗೆ, ಈ ಪ್ರಕರಣ ಸದ್ಯಕ್ಕೆ ಯಾವುದೇ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಪ್ರಕರಣದ ನಿಗೂಢತೆ ಹಾಗೇ ಉಳಿದಿದ್ದು, ತನಿಖಾಧಿಕಾರಿಗಳು ನಿಗೂಢ ಭೇದಿಸಲು ಸಾಕ್ಷ್ಯಾಗಳ ಬೆನ್ನತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net