

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟವು ( Delhi Blast ) ಆತ್ಮಾಹುತಿ ಬಾಂಬ್ ದಾಳಿ ಎಂದು ಹೇಳಲಾಗುತ್ತಿದೆ. ಈ ಭೀಕರ ದಾಳಿಯ ಹಿಂದಿರುವ ಶಂಕಿತ ಸೂಸೈಡ್ ಬಾಂಬರ್ ಅನ್ನು ಡಾ. ಉಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಆತನ ಮಾಹಿತಿ ಸಿಕ್ಕ ಕೂಡಲೇ ತನಿಖಾ ತಂಡ ಕಾಶ್ಮೀರದಲ್ಲಿರುವ ಆತನ ಮನೆಗೆ ತೆರಳಿ ಈ ವಿಚಾರಣೆ ಮಾಡಿದ್ದು, ಕುಟುಂಬಸ್ಥರು ಆತನ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಉಮರ್ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಾಶ್ಮೀರದಲ್ಲಿರುವ ಆತನ ತಾಯಿ ಮತ್ತು ಸಹೋದರನನ್ನು ದೆಹಲಿಯ ತನಿಖಾ ತಂಡ ವಶಕ್ಕೆ ಪಡೆದಿದೆ. ಸದ್ಯಕ್ಕೆ ಶಂಕಿತ ಉಮರ್ ಬಗ್ಗೆ ತನಿಖಾಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಉಮರ್‌ಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಇರುವ ವಿಚಾರ ನಮಗೆ ತಿಳಿದಿರಲಿಲ್ಲ. ಅಲ್ಲದೆ, ಆತ ಮನೆಯಲ್ಲಿ ತುಂಬಾ ಶಾಂತವಾಗಿರುತ್ತಿದ್ದ. ಆತನ ಕುಟುಂಬ ತುಂಬಾ ಕಷ್ಟಪಟ್ಟು ಆತನನ್ನು ಚೆನ್ನಾಗಿ ಓದಿಸಿ, ವೈದ್ಯನನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ಒಂದೊಳ್ಳೆ ಸ್ಥಾನದಲ್ಲಿ ಕೂರಿಸಿತ್ತು. ಆತನ ಬಗ್ಗೆ ನಾವೀಗ ಕೇಳಿದ ಸುದ್ದಿ ನಿಜಕ್ಕೂ ನಂಬಲಾಗದು. ನಿಜವಾಗಿಯೂ ಆತ ಮನೆಯಲ್ಲಿ ಕೂಲ್ ಆಗಿರುತ್ತಿದ್ದ. ಎರಡು ತಿಂಗಳ ಹಿಂದೆ ನಾನು ಕೊನೆಯ ಬಾರಿಗೆ ಉಮರ್ನನ್ನು ನೋಡಿದೆ. ನಾನು ಮೂರು ದಿನಗಳ ಹಿಂದೆ ಅಂದರೆ ಶುಕ್ರವಾರ ಆತನನ್ನು ಮನೆಗೆ ಕರೆದಿದ್ದೆ ಎಂದು ಉಮರ್ ಸಹೋದರನ ಪತ್ನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಂಕಿತ ಡಾ. ಉಮರ್ ದಕ್ಷಿಣ ಕಾಶ್ಮೀರದ ಪುಲ್ವಾಮದ ನಿವಾಸಿ. ತಮ್ಮ ಮಿಂಚಿನ ಕಾರ್ಯಾಚರಣೆಯಲ್ಲಿ “ವೈಟ್ ಕಾಲರ್” ಟೆರರಿಸ್ಟ್ ಮಾಡ್ಯೂಲ್ ಅನ್ನು ಭೇದಿಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸ್ ತಂಡಗಳು, ಸೋಮವಾರ ಬೆಳಗ್ಗೆ ಇಬ್ಬರು ವೈದ್ಯರಾದ ಡಾ. ಆದೀಲ್ ಅಹ್ಮದ್ ರಾಥರ್ ಮತ್ತು ಡಾ. ಮುಜಾಮಿಲ್ ಶಕಿಲ್ ಎಂಬುವರನ್ನು ಬಂಧಿಸಿದರು. ಶಂಕಿತ ಉಮರ್, ಈ ಇಬ್ಬರು ವೈದ್ಯರ ಸಹಚರನೆಂಬುದು ತಿಳಿದುಬಂದಿದೆ.
ತನ್ನ ಸಹಚರರ ಬಂಧನ ಸುದ್ದಿ ಕೇಳುತ್ತಿದ್ದಂತೆ ಡಾ. ಉಮರ್, ಫರೀದಾಬಾದ್ನಿಂದ ಎಸ್ಕೇಪ್ ಆಗಿದ್ದ. ತಾನು ಕೂಡ ಬಂಧಿಯಾಗಿಬಿಡುತ್ತೇನೆ ಎಂಬ ಭಯದಲ್ಲೇ ಆದಷ್ಟು ಬೇಗ ತನ್ನ ಕೆಲಸ ಮಾಡಿಬಿಡೋಣ ಅಂತ ಕಾರು ಸ್ಫೋಟ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಂದಹಾಗೆ, ಈ ಉಮರ್, ತನ್ನ ಸಹಚರರೊಂದಿಗೆ ಸೇರಿ ಭೀಕರ ದಾಳಿಗೆ ಯೋಜಿಸಿದ್ದ. ತನ್ನ ಪ್ಲಾನ್ ಭಾಗವಾಗಿ ತನ್ನ ಕಾರಿನಲ್ಲಿ ಡಿಟೋನೇಟರ್ ಅನ್ನು ಇಟ್ಟಿದ್ದ. ಆದರೆ, ಸಹಚರರ ಬಂಧನ ಉಮರ್ ಎದೆಯಲ್ಲಿ ನಡುಕ ಹುಟ್ಟಿಸಿತು. ಹೀಗಾಗಿ, ತನ್ನ ಕೆಲಸ ಮುಗಿಸಿಬಿಡೋಣ ಅಂತ ಕಾರು ಸ್ಫೋಟ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕೆಂಪು ಕೋಟೆಯ ಬಳಿ ಬಿಳಿ ಬಣ್ಣದ ಹ್ಯೂಂಡೈ ಐ20 ಕಾರು ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ನೋಂದಣಿ ಸಂಖ್ಯೆ HR 26CE7674. ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಕೆಂಪು ಕೋಟೆಯ ಸಮೀಪವೇ ಈ ಕಾರನ್ನು ಪಾರ್ಕ್ ಮಾಡಲಾಗಿತ್ತು. ಮಧ್ಯಾಹ್ನ 3.19ಕ್ಕೆ ಆಗಮಿಸಿ, ಸಂಜೆ 6.30ಕ್ಕೆ ಅಲ್ಲಿಂದ ಹೊರಟಿತು.
ಆರಂಭಿಕ ತನಿಖೆಯ ಪ್ರಕಾರ, ದಾಳಿಯಲ್ಲಿ ಬಳಸಲಾದ ಕಾರು ಹಲವು ಬಾರಿ ಕೈ ಬದಲಾಗಿದೆ ಅಂದರೆ ವ್ಯಕ್ತಿಗಳಿಂದ ವ್ಯಕ್ತಿಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಈ ಕಾರನ್ನು ಸಲ್ಮಾನ್ ಎಂಬುವರು 2025 ಮಾರ್ಚ್ ತಿಂಗಳಲ್ಲಿ ದೇವೇಂದರ್ ಅವರಿಗೆ ಮಾರಾಟ ಮಾಡಿದ್ದರು. ನಂತರ, ಅಕ್ಟೋಬರ್ 29ರಂದು ದೇವೇಂದರ್ನಿಂದ ಆಮಿರ್ಗೆ ಹಸ್ತಾಂತರವಾಯಿತು. ಬಳಿಕ ಆಮಿರ್ನಿಂದ ಅದು ಡಾ. ಉಮರ್ ಮೊಹಮ್ಮದ್ ಗೆ ತಲುಪಿತು. ಕಾರು ವಿನಿಮಯದ ಬಗ್ಗೆ ತಾರಿಕ್‌ಗೆ ಮಾಹಿತಿ ಇತ್ತು. ದೆಹಲಿ ಪೊಲೀಸ್ ತಂಡವು ಆಮಿರ್ ಮತ್ತು ತಾರಿಕ್ ಎಂಬುವರನ್ನು ಸದ್ಯ ವಿಚಾರಣೆ ನಡೆಸುತ್ತಿದೆ.
ಪ್ರಸ್ತುತ ತನಿಖಾಧಿಕಾರಿಗಳ ಬಂಧನದಲ್ಲಿರುವ ವೈದ್ಯರನ್ನು ಹೊರತುಪಡಿಸಿ ಈ ಗ್ಯಾಂಗ್‌ನಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಎಂದು ಕಂಡುಹಿಡಿಯಲು ತನಿಖೆಯನ್ನು ಮುಂದುವರಿಸಿದ್ದಾರೆ. ಭಯೋತ್ಪಾದಕ ಸಂಘಟನೆಗಳು 'ವೈಟ್-ಕಾಲರ್ ಟೆರರ್ ಮಾಡ್ಯೂಲ್' ರೂಪದಲ್ಲಿ ಉನ್ನತ ಶಿಕ್ಷಣದ ಬಳಿಕ ಉನ್ನತ ಮಟ್ಟದ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿರುವ ಯುವಕರನ್ನೇ ಟಾರ್ಗೆಟ್ ಮಾಡುತ್ತಿವೆ. ಹೀಗಾಗಿ ಪ್ರಸ್ತುತ, ಭದ್ರತಾ ಪಡೆಗಳು ದೇಶದ ಎಲ್ಲಾ ಪ್ರಮುಖ ಭಾಗಗಳಲ್ಲಿ ಅಂತಹ ವ್ಯಕ್ತಿಗಳ ಹುಡುಕಾಟವನ್ನು ತೀವ್ರಗೊಳಿಸಿವೆ. (ಏಜೆನ್ಸೀಸ್)