

ಚಿಕ್ಕಮಗಳೂರು/ಕೊಟ್ಟಿಗೆಹಾರ: ಪತ್ನಿ ಗಂಡನ ಜತೆ ಜಗಳವಾಡಿ ತವರು ಮನೆಗೆ ಹೋಗಿದ್ದಕ್ಕೆ ವ್ಯಕ್ತಿಯೊಬ್ಬ ತವರು ಮನೆಗೆ ವಾಮಾಚಾರ ಮಾಡಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮತ್ತಿಕಟ್ಟೆ ಗ್ರಾಮದ ಸತೀಶ್ ಎಂಬವರು ತನ್ನ ತಂಗಿ ಸುಮಿತ್ರರನ್ನು 12 ವರ್ಷಗಳ ಹಿಂದೆ ಮರಸಣಿಗೆ ಗ್ರಾಮದ ನಿವಾಸಿ ಗುರುಮೂರ್ತಿ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಗಿನಿಂದಲೂ ಗಂಡ-ಹೆಂಡತಿ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು.
ಈ ಸಂಬಂಧ ದೊಡ್ಡವರು ರಾಜಿ-ಪಂಚಾಯತಿ ಮಾಡಿದ್ದರು ಇಬ್ಬರು ಹೊಂದಾಣಿಕೆಗೆ ಬಂದಿರಲಿಲ್ಲ, ಒಂದು ತಿಂಗಳ ಹಿಂದೆ ಗಂಡ- ಹೆಂಡತಿ ಮಧ್ಯೆ ಮತ್ತೆ ಜಗಳವಾದ ಕಾರಣ ಸುಮಿತ್ರ ಅಣ್ಣನ ಮನೆ ಸೇರಿದ್ದಳು. ಇದರಿಂದ ಕೋಪಗೊಂಡ ಪತಿ ಗುರುಮೂರ್ತಿ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಸುಮಿತ್ರ ಅವರ ಅಣ್ಣ ಸತೀಶ್ ಮನೆಗೆ ಬಂದು ನನ್ನ ಹೆಂಡತಿಯನ್ನು ಕರೆದುಕೊಂಡು ಬಂದಿದ್ದೀಯಾ. ನಿನ್ನನ್ನು ಬಿಡುವುದಿಲ್ಲ ಎಂದು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕುತಿದ್ದನ್ನು ಗಮನಿಸಿದ ಸುಮಿತ್ರ ಅಣ್ಣ ಸತೀಶ್ ಬಾಗಿಲು ತೆಗೆದು ಹೊರಗೆ ಬರುವಷ್ಟರಲ್ಲಿ ಗುರುಮೂರ್ತಿ ಅಲ್ಲಿಂದ ಪರಾರಿಯಾದ.
ಮತ್ತೆ ಬೆಳಗಿನ ಜಾವ 6 ಗಂಟೆಗೆ ಮನೆಯಿಂದ ಹೊರ ಬಂದಾಗ ಮನೆ ಮುಂದೆ ಯಾವುದೋ ಪ್ರಾಣಿಯ ರಕ್ತ ಚೆಲ್ಲಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಗುರುಮೂರ್ತಿ ತೋರಿಸಿದ್ದ ಚಾಕುವನ್ನೂ ಅಲ್ಲೆ ಬಿಸಾಡಿ ಹೋಗಿದ್ದಾನೆ. ಕೊಲೆ ಬೆದರಿಕೆ ಹಾಕಿರುವ ತಂಗಿಯ ಗಂಡ ಗುರುಮೂರ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸತೀಶ್ ಬಣಕಲ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಗುರುಮೂರ್ತಿಯನ್ನು ಬಂಧಿಸಿದ್ದಾರೆ.