

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಸಂಬಂಧಿಸಿದಂತೆ ದಿನಾಂಕ ನಿಗದಿಯಾಗಿದ್ದು, ಈ ಸಲ ಎಂದಿನಿಂದ ಎಂದಿನವರೆಗೆ ಒಟ್ಟು ಎಷ್ಟು ದಿನಗಳ ಅಧಿವೇಶನ ನಡೆಯಲಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಮಾಹಿತಿ ನೀಡಿದ್ದಾರೆ.
2023ನೇ ಸಾಲಿನ ಚಳಿಗಾಲದ ಸಂಸತ್ ಅಧಿವೇಶನವು ಡಿ. 4ರಂದು ಆರಂಭಗೊಳ್ಳಲಿದ್ದು, ಡಿ. 22ರವರೆಗೂ ಇರಲಿದೆ ಎಂದು ಅವರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ 19 ದಿನಗಳಲ್ಲಿ 15 ಸಭೆ ನಡೆಯಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಅಮೃತ ಕಾಲದ ಈ ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿರುವುದನ್ನು ನಿರೀಕ್ಷಿಸಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಚಳಿಗಾಲದ ಅಧಿವೇಶನವು ಸಾಮಾನ್ಯವಾಗಿ ನವೆಂಬರ್ ಮೂರನೇ ವಾರದಲ್ಲಿ ಬರುತ್ತಿದ್ದು, ಡಿ. 25ರ ಒಳಗೆ ಮುಗಿಯುತ್ತಿತ್ತು. ಆದರೆ ಈ ಸಲ ಸ್ವಲ್ಪ ತಡವಾಗಿ ಆರಂಭವಾಗುತ್ತಿದೆ ಎನ್ನಲಾಗಿದೆ. ಐಪಿಸಿ, ಸಿಆರ್ಪಿಸಿ, ಎವಿಡೆನ್ಸ್ ಆ್ಯಕ್ಟ್ಗೆ ಪರ್ಯಾಯವಾಗಿ ರೂಪಿಸಲಾದ ಮಸೂದೆಗಳು ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ ಎಂದೂ ಹೇಳಲಾಗುತ್ತಿದೆ.