ಚಳಿ ಕೊರೆತ, ಶೀತ ಕಾಯಿಲೆ ವಿಪರೀತ: ಬಿಡದ ಮಳೆ, ನಡುಗಿಸುತ್ತಿದೆ ಚಳಿ..

Cold
Published on

| ಪಂಕಜ ಕೆ.ಎಂ. ಬೆಂಗಳೂರು

ಕರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಜನತೆ ಸಮಾಧಾನ ಪಟ್ಟುಕೊಳ್ಳಲು ಹವಾಮಾನ ಆಸ್ಪದ ನೀಡುತ್ತಿಲ್ಲ. ಒಂದೆಡೆ ನವೆಂಬರ್ ತಿಂಗಳಲ್ಲಿ ಹತ್ತು ದಿನ ಕಳೆದರೂ ಮಳೆಗಾಲ ಮುಗಿಯುತ್ತಿಲ್ಲ. ಇನ್ನೊಂದೆಡೆ ಮೈಕೊರೆವ ಚಳಿ ನಡುಕ ಹುಟ್ಟಿಸುತ್ತಿದ್ದು, ಮಕ್ಕಳಿಂದ ವೃದ್ಧರವರೆಗೆ ಉಸಿರಾಟದ ತೊಂದರೆ ಸೇರಿ ನಾನಾ ಶೀತ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮತ್ತೊಂದೆಡೆ ನಿರಂತರ ಮಳೆಯಿಂದಾಗಿ ಡೆಂಘ, ಚಿಕುನ್ ಗುನ್ಯಾ ಪ್ರಕರಣ ಕೂಡ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ವೈರಾಣು ರೋಗ ಕಾಡುವ ಭೀತಿ ಎದುರಾಗಿದೆ.

ಮಕ್ಕಳಲ್ಲೇ ಹೆಚ್ಚು: ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ನಿತ್ಯ ಚಿಕಿತ್ಸೆಗೆ ಬರುವ ಮಕ್ಕಳಲ್ಲಿ ಶೇ. 25-30 ಮಕ್ಕಳು, ವಾಣಿವಿಲಾಸ ಆಸ್ಪತ್ರೆಯಲ್ಲಿ ನಿತ್ಯ 20ಕ್ಕೂ ಹೆಚ್ಚು ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಉಸಿರಾಟದ ತೊಂದರೆ, ಶೀತ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚರ್ಮದ ಸಮಸ್ಯೆ: ಚಳಿಗಾಲದಲ್ಲಿ ಒಣ, ಸೂಕ್ಷ್ಮ ಚರ್ಮದವರು ಹೆಚ್ಚು ಜಾಗೃತಿ ವಹಿಸುವ ಅಗತ್ಯವಿದೆ. ಇಸುಬು, ಹುಳುಕಡ್ಡಿ, ತುರಿಕೆ, ತಲೆ ಹೊಟ್ಟು, ತುಟಿ, ಹಿಮ್ಮಡಿ ಒಡೆತ , ಚರ್ಮ ಬಿರಿದು ಕಾಂತಿಹೀನವಾಗುತ್ತದೆ. ಬಿಸಿಲಿಗೆ ಮೈ ಸೋಕಿದರೆ ಚರ್ಮಕ್ಕೆ ಚುಚ್ಚಿದಂತಹ ಅನುಭವವಾಗುತ್ತದೆ. ಹೀಗಾಗಿ ವೈದ್ಯರ ಸಲಹೆ ಪಡೆಯಬೇಕೆನ್ನುತ್ತಾರೆ ಇಎಸ್​ಐ ಆಸ್ಪತ್ರೆ ಚರ್ಮರೋಗ ತಜ್ಞ ಡಾ. ಗಿರೀಶ್.

ವೈರಾಣು ಸೋಂಕು ಏರಿಕೆ: ಬೆಳಗ್ಗೆ, ಸಂಜೆ ಅತಿಯಾದ ಚಳಿ, ಮಧ್ಯಾಹ್ನ ಕೊಂಚ ಬಿಸಿಲು ಇರುವುದರಿಂದ ವಾತಾವರಣವು ಅತಿಯಾದ ಆರ್ದ್ರತೆ , ಧೂಳಿನಿಂದ ಕೂಡಿರುತ್ತದೆ. ಇದರಿಂದ ಶೀತ ಹಾಗೂ ಜ್ವರ ಅಷ್ಟೇ ಅಲ್ಲ ವೈರಾಣು ಸೋಂಕಿನಿಂದ ಮಕ್ಕಳಲ್ಲಿ ವಾಂತಿ ಭೇದಿ ಪ್ರಕರಣಗಳು ಸಹ ಹೆಚ್ಚಿವೆ ಎನ್ನುತ್ತಾರೆ ಕೆ.ಸಿ.ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮೀಪತಿ.

ಡೆಂಘಗೆ ಐವರು ಬಲಿ: ರಾಜ್ಯದಲ್ಲಿ ಈವರೆಗೂ 5,185 ಮಂದಿಯನ್ನು ಡೆಂಘ ಬಾಧಿಸಿದ್ದು, 21 ದಿನಗಳ ಅಂತರದಲ್ಲಿ ರಾಮನಗರದಲ್ಲಿ ಇಬ್ಬರು, ಬೆಳಗಾವಿ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಂತೆ ಐವರು ಸಾವನ್ನಪ್ಪಿದ್ದಾರೆ. 1,621 ಚಿಕುನ್ ಗುನ್ಯಾ ಪ್ರಕರಣ ವರದಿಯಾಗಿವೆ.

ಹರಡುವ ಸೋಂಕು: ಚಳಿಗಾಲದಲ್ಲಿ ವೈರಾಣು ಗಾಳಿಯಲ್ಲಿ ವೇಗವಾಗಿ ಹರಡುತ್ತದೆ. ತಣ್ಣನೆ ವಾತಾವರಣದಿಂದ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುವುದರಿಂದ ಶೀತ ಹಾಗೂ ಜ್ವರ ಬೇಗನೇ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎನ್ನುತ್ತಾರೆ ವೈದ್ಯರು.

ಮುಂಜಾಗ್ರತೆ ಕ್ರಮಗಳು

  • ಮಕ್ಕಳು, ವೃದ್ಧರನ್ನು ಸದಾ ಬೆಚ್ಚಗೆ ಇರಿಸಬೇಕು, ತಾಜಾ ಹಾಗೂ ಬಿಸಿ ಆಹಾರ ಸೇವಿಸಬೇಕು, ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು
  • ಎಣ್ಣೆಯಲ್ಲಿ ಕರಿದ, ಮಸಾಲೆ ಪದಾರ್ಥಗಳ ಮಿತ ಬಳಕೆ ಮಾಡಿ
  • ತಾಜಾ ಹಣ್ಣಿನ ರಸ ಸೇವಿಸಬೇಕು
  • ತ್ವಚೆಯ ಆರೈಕೆಗಾಗಿ ಕೋಲ್ಡ್ ಕ್ರೀಮ್ ಲೋಷನ್​ಗಳನ್ನು ಬಳಸಿ
  • ಜನದಟ್ಟಣೆ ಸ್ಥಳ ಹಾಗೂ ಜಾತ್ರೆಗಳಿಂದ ದೂರ ಇರುವುದು ಒಳಿತು, ತಿಳಿ ಬಣ್ಣದ ಉಣ್ಣೆ ಅಥವಾ ಹತ್ತಿ ಬಟ್ಟೆ ಧರಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net