1 ಕೆಜಿ ಚಿಕನ್​ ಬೆಲೆ 306 ರೂಪಾಯಿ! ಇದು ಸಾರ್ವಕಾಲಿಕ ದಾಖಲೆ,​ ಬೆಲೆ ಏರಿಕೆಗೆ ಕಾರಣವೇನು?

chickens
Published on

ವಿಜಯವಾಡ: ಕರೊನಾ ಲಾಕ್​​ಡೌನ್​ ಸಮಯದಲ್ಲಿ ತೀರಾ ಕಡಿಮೆ ಇದ್ದ ಚಿಕನ್ ಬೆಲೆ ಇದೀಗ ಆಂಧ್ರ ಪ್ರದೇಶದಲ್ಲಿ ರಾಕೆಟ್​ ವೇಗದಲ್ಲಿ ಏರಿಕೆಯಾಗುತ್ತಿದೆ. ಒಂದು ಕೆಜಿಗೆ 306 ರೂಪಾಯಿ ಇದ್ದು, ಆಂಧ್ರ ಮಾತ್ರವಲ್ಲ, ದೇಶದಲ್ಲೇ ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಕಳೆದ ವರ್ಷ ಗರಿಷ್ಠ 270ಕ್ಕೆ ಏರಿತ್ತು. ಆದರೆ, ಈ ವರ್ಷ ಅದನ್ನು ಮೀರಿಸಿದೆ. ಕರೊನಾ ಸಮಯದಲ್ಲಿ ಕೋಳಿ ಉದ್ಯಮದ ಮೇಲೆ ತೀವ್ರ ಹೊಡೆತ ಬಿದ್ದಿತ್ತು. ಕೊಳ್ಳುವವರು ಇಲ್ಲದೆ, ಸಾಕಷ್ಟು ಕೋಳಿಗಳನ್ನು ಜೀವಂತ ಸಮಾಧಿಯನ್ನು ಮಾಡಲಾಗಿತ್ತು. ಆದರೆ, ಇದೀಗ ಕೋಳಿ ಉದ್ಯಮ ಚಿನ್ನದ ಮೊಟ್ಟೆ ಇಡುತ್ತಿದೆ.

ಕಳೆದ ಡಿಸೆಂಬರ್​ನಲ್ಲಿ ಚಿಕನ್​ ಬೆಲೆ ಕೆಜಿಗೆ 250 ರೂ. ಇತ್ತು. ಆದರೆ, ಹಕ್ಕಿ ಜ್ವರದಿಂದ ಬದಲಾದ ಪರಿಸ್ಥಿತಿಯಲ್ಲಿ ಕೆಜಿ 150 ರೂ.ಗೆ ಇಳಿದಿತ್ತು. ಹಕ್ಕಿ ಜ್ವರ ಕಡಿಮೆ ಆಗುತ್ತಿದ್ದಂತೆ ಏರುಗತಿಯಲ್ಲಿ ಸಾಗಲು ಆರಂಭಿಸಿದ ಚಿಕನ್​ ಬೆಲೆ ಮತ್ತೆ ಕೆಳಗಿಳಿದೇ ಇಲ್ಲ. ಫೆಬ್ರವರಿಯಲ್ಲಿ 200 ರೂ. ಇದ್ದ ಚಿಕನ್​ ಬೆಲೆ, ಮಾರ್ಚ್​ಗೆ 260ಕ್ಕೆ ಏರಿತು. ಏಪ್ರಿಲ್​ ಆರಂಭದಲ್ಲಿ 270 ಮತ್ತು 296 ರೂ. ಇದ್ದ ಚಿಕನ್​ ಬೆಲೆ ಏಪ್ರಿಲ್​ 4ರಂದು 306 ರೂ. ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ಕೋಳಿ ಉದ್ಯಮ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಬೆಲೆಗೆ ಬಂದಿದೆ. ಕೋಳಿ ಪೂರೈಕೆ ಕೊರೆತೆಯೇ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ಅಲ್ಲದೆ, ಬಾಯ್ಲರ್​ ಚಿಕನ್​ ಪೂರೈಕೆಯಲ್ಲೂ ಕೊರತೆ ಉಂಟಾಗಿದೆ. ಇದರೊಂದಿಗೆ ಬಿರು ಬೇಸಿಗೆ ಆದ್ದರಿಂದ ಸಾಕಷ್ಟು ಕೋಳಿಗಳು ಸಹ ಸಾಯುತ್ತಿವೆ. ಹೀಗಾಗಿ ಕೋಳಿಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಆಗಿರುವುದರಿಂದ ಬೆಲೆ ಏರುಗತಿಯಲ್ಲಿದೆ. ಇನ್ನು ಎರಡು ವಾರಗಳ ಬಳಿಕ ಬೆಲೆಯು ಇಳಿಕೆಯತ್ತ ಸಾಗಲಿದೆ ಎಂದು ಕೋಳಿ ಉದ್ಯಮದ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net