

ನವದೆಹಲಿ: ಪೋರ್ಚುಗಲ್‍ನ ಸಾವೊ ಲೊರೆಂಕೊ ಡಿ ಬೈರೊ ಎಂಬ ಸಣ್ಣ ಪಟ್ಟಣದ ಬೀದಿಗಳಲ್ಲಿ ಭಾನುವಾರ ಕೆಂಪು ವೈನ್ ನದಿ ಹರಿಯಲು ಪ್ರಾರಂಭಿಸಿದ್ದು ಜನರು ಆಶ್ಚರ್ಯಚಕಿತರಾದರು. ಇದರಿಂದಾಗಿ ಪಾನ ಪ್ರಿಯರೂ ಶಾಕ್‍ಗೆ ತುತ್ತಾಗಿದ್ದು ಕೆಲ ಕಾಲ ತಮ್ಮ ಇಷ್ಟದ ವೈನ್ ಲಭ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕಡಿದಾದ ಬೆಟ್ಟದಿಂದ ಲಕ್ಷಾಂತರ ಲೀಟರ್ ವೈನ್ ಹರಿದು ಬೀದಿಗಳಲ್ಲಿ ಹರಿಯುತ್ತಿರುವುದನ್ನು ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ವೀಡಿಯೊಗಳು ಪಟ್ಟಣದ ಓಣಿಗಳಲ್ಲಿ ಕೊನೆಯಿರದ ವೈನ್ ನದಿ ಹರಿಯುತ್ತಿರುವುದನ್ನು ತೋರಿಸುತ್ತವೆ.
ಈ ವೈನ್ ನದಿಯು ಪಟ್ಟಣದ ಡಿಸ್ಟಿಲರಿಯಿಂದ ಹುಟ್ಟಿಕೊಂಡಿದ್ದು ಅಲ್ಲಿ 2 ಮಿಲಿಯನ್ ಲೀಟರ್ ರೆಡ್ ವೈನ್ ಹೊಂದಿರುವ ಬ್ಯಾರೆಲ್‍ಗಳನ್ನು ಸಾಗಿಸುವ ಟ್ಯಾಂಕ್‍ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡವು ಎಂದು ದಿ ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ.
ಸೋರಿಕೆಯಾಗಿರುವ ವೈನ್ ಬಳಸಿ ಒಲಿಂಪಿಕ್ ಗಾತ್ರದ ಈಜುಕೊಳವನ್ನು ತುಂಬಬಹುದು ಎನ್ನಲಾಗುತ್ತಿದೆ. ಇನ್ನು ಬೃಹತ್ ಪ್ರಮಾಣದಲ್ಲಿ ಸೋರಿಕೆಯಾದ ವೈನ್ ನದಿಯು ಹತ್ತಿರದ ನದಿಗೆ ಸೇರುತ್ತಿರುವುದು ಪರಿಸರದ ಆರೋಗ್ಯದ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿತು. ಈ ಸೋರಿಕೆಯ ಕಾರಣ ಡಿಸ್ಟಿಲರಿ ಪಕ್ಕದಲ್ಲಿದ್ದ ಮನೆಯ ನೆಲಮಾಳಿಗೆಯಲ್ಲಿ ವೈನ್ ತುಂಬಿ ತುಳುಕುತ್ತಿದೆ ಎನ್ನಲಾಗಿದೆ. ಈ ಮೂಲಕ ಆ ಮನೆಯಲ್ಲಿ ವೈನ್ ಪ್ರವಾಹವೇ ಸೃಷ್ಟಿಯಾಗಿದೆ ಎನ್ನಬಹುದು.
ಸೆರ್ಟಿಮಾ ನದಿ, ವೈನ್ ನದಿಯಾಗಿ ಪರಿವರ್ತನೆ ಆಗುವ ಮೊದಲು ವೈನ್ ಪ್ರವಾಹವನ್ನು ತಡೆಯಲು ಅಗ್ನಿಶಾಮಕ ಇಲಾಖೆ ಕ್ರಮ ಕೈಗೊಂಡಿತು. ವೈನ್ ಪ್ರವಾಹವನ್ನು ಬೇರೆಡೆಗೆ ತಿರುಗಿಸಲಾಗಿದ್ದು ಹತ್ತಿರದ ಹೊಲಕ್ಕೆ ಹರಿಯುವಂತೆ ಮಾಡಲಾಯಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ತಿಳಿಸಿದೆ.
ಈ ವಿಲಕ್ಷಣ ಘಟನೆಗೆ ಲೆವಿರಾ ಡಿಸ್ಟಿಲರಿ ಕ್ಷಮೆಯಾಚಿಸಿದ್ದು ಪಟ್ಟಣದಲ್ಲಿ ವೈನ್‍ನಿಂದ ನೆನೆದಿರುವ ಭೂಮಿಯನ್ನು ಹೂಳೆತ್ತಲಿದೆ ಎಂದು ಭರವಸೆ ನೀಡಿದೆ. "ಹಾನಿಯನ್ನು ಸರಿಪಡಿಸಲು ಮತ್ತು ನೆಲವನ್ನು ಸ್ವಚ್ಛಗೊಳಿಸಲು ಸಂಬಂಧಿಸಿದ ವೆಚ್ಚಗಳ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ನಮ್ಮ ತಂಡಗಳು ತಕ್ಷಣವೇ ಸಹಾಯಕ್ಕೆ ಧಾವಿಸಲಿವೆ" ಎಂದು ಡಿಸ್ಟಿಲರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. (ಏಜೆನ್ಸೀಸ್)