ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಹೋಗುತ್ತಿದ್ದ ರೌಡಿಶೀಟರ್ ಹತ್ಯೆ; ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ ಕೋರ್ಟ್‌ಗೆ ಶರಣು

arrest
Published on

ಬೆಂಗಳೂರು: ಜೈಲಿನಿಂದ ಬಿಡುಗಡೆಯಾಗಿ ಬರುತ್ತಿದ್ದ ರೌಡಿ ಸಿದ್ದಾಪುರ ಮಹೇಶ್‌ನನ್ನು ನಡುರಸ್ತೆಯಲ್ಲಿ ಕೊಲೆ ಮಾಡಿದ್ದ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನ ಕೊರ್ಟ್‌ಗೆ ಶರಣಾಗಿದ್ದಾರೆ.

ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾದ ವಿಲ್ಸನ್ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನನ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆ.28 ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಮಹೇಶ ಅಲಿಯಾಸ್ ಸಿದ್ದಾಪುರ ಮಹೇಶ್, ಅ.4ರ ರಾತ್ರಿ 9.20ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಇಯಿಟೋಸ್ ಕಾರಿನಲ್ಲಿ ಜೈಲಿನಿಂದ ಮನೆ ಕಡೆ ಹೊರಟಿದ್ದ. ಹೊಸೂರು ರಸ್ತೆ ಸಿಗ್ನಲ್ ಬಳಿಗೆ ಬಂದಾಗ ಏಕಾಏಕಿ ಕಾರಿಗೆ ಅಡ್ಡಬಂದಿದ್ದ ಆರೇಳು ಮಂದಿ ಮಾರಕಾಸಗಳಿಂದ ದಾಳಿ ನಡೆಸಿದ್ದರು.

ಕಾರಿನಿಂದ ಇಳಿದು ತಪ್ಪಿಸಿಕೊಳ್ಳುತ್ತಿದ್ದ ಮಹೇಶ್‌ನನ್ನು ಅಟ್ಟಾಡಿಸಿ ನಡುರಸ್ತೆಯಲ್ಲಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದರು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

2021ರಲ್ಲಿ ವಿಲ್ಸನ್ ಗಾರ್ಡನ್ ನಾಗನ ಗೆಳೆಯ ಮದನ್ ಬನಶಂಕರಿ ದೇವಾಲಯದ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಮಹೇಶ ಕೊಚ್ಚಿ ಕೊಲೆ ಮಾಡಿದ್ದ. ಇದರ ದ್ವೇಷಕ್ಕೆ ನಾಗ ಕೊಲೆ ಮಾಡಿಸಿದ್ದ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net