

ಜನವರಿ 20ಕ್ಕೆ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದರು. ಮಾರ್ಚ್ 20ಕ್ಕೆ ಅವರ ಅಧಿಕಾರಾವಧಿ 60 ದಿನಗಳನ್ನು ಪೂರೈಸಲಿದೆ. ಈ ಅಲ್ಪಾವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಟ್ರಂಪ್ ಸ್ನೇಹಿತರ ಸಂಖ್ಯೆ ಕಡಿಮೆಯಾಗಿದ್ದು, ಶತ್ರುಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಪ್ರಮುಖ ಕಾರಣ ‘ಪಾರಸ್ಪರಿಕ ತೆರಿಗೆ’. ಮತ್ತೆಮತ್ತೆ ಭಾರತವನ್ನು ‘ಆಪ್ತಮಿತ್ರ’ ಎಂದು ಕರೆದ ಟ್ರಂಪ್, ಸುಂಕದ ವಿಷಯದಲ್ಲಿ ಮಾತ್ರ ಯಾವುದೇ ವಿನಾಯ್ತಿ ತೋರಿಲ್ಲ. ಆದರೆ, ಭಾರತ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತೀಕ್ಷ್ಣ ಪ್ರತಿಕ್ರಿಯೆ ನೀಡುವ ಅವಸರ ತೋರಿಲ್ಲ. ಕಾರಣ, ದ್ವಿಪಕ್ಷೀಯ ಮಾತುಕತೆಗಳ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂಬ ವಿಶ್ವಾಸ. ಆದರೆ, ಉಳಿದ ರಾಷ್ಟ್ರಗಳು ಹಾಗಲ್ಲ. ‘ಟ್ರಂಪ್ ಅಪ್ರಾಯೋಗಿಕ, ಅಸಂಬದ್ಧ ನೀತಿಗಳನ್ನು ತಳೆಯುತ್ತಿದ್ದಾರೆ’ ಎಂದು ಬಹಿರಂಗವಾಗಿ ತಿರುಗೇಟು ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಅವಲೋಕನ ಇಲ್ಲಿದೆ.
‘ನೀವು ಉತ್ಪನ್ನಗಳ ಮೇಲೆ ಅಧಿಕ ಸುಂಕ ಹಾಕುತ್ತೀರಿ ಎಂದರೆ ಅಮೆರಿಕ ಕೂಡ ಇದೇ ನೀತಿ ಅನುಸರಿಸಲಿದೆ. ತೆರಿಗೆ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ’- ಹೀಗೆ ಅಧಿಕಾರಾವಧಿಯ ಆರಂಭಿಕ ಘಟ್ಟದಲ್ಲೇ ಪಾರಸ್ಪರಿಕ ತೆರಿಗೆ ಸಮರ ಸಾರಿರುವ ಟ್ರಂಪ್, ಈ ನೀತಿಯ ಮೂಲಕ ಏನನ್ನು ಸಾಧಿಸಲು ಹೊರಟಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಾರಣ, ಇವರ ಇಂಥ ದಿಢೀರ್ ನಿರ್ಧಾರಗಳಿಂದ ಅಮೆರಿಕದ ಷೇರುಪೇಟೆ ತತ್ತರಿಸಿದೆ. ಅದರಿಂದ ಏಷ್ಯಾ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ಹಲವು ದೇಶಗಳ ಷೇರುಪೇಟೆಯಲ್ಲಿ ಮಂದ ವಾತಾವರಣ ಕವಿದಿದೆ. ಹೂಡಿಕೆದಾರರು ಟ್ರಂಪ್ ನಡೆಯನ್ನು ಅರ್ಥ ಮಾಡಿಕೊಳ್ಳಲಾಗದೆ, ಸುಮ್ಮನಾಗಿದ್ದಾರೆ. ಅಮೆರಿಕದಲ್ಲೂ ಒಂದು ವಲಯ ಟ್ರಂಪ್ರ ಈ ನೀತಿಯನ್ನು ವಿರೋಧಿಸುತ್ತಿದ್ದರೆ, ಮತ್ತೊಂದು ವಲಯ ಸ್ವಾಗತಿಸುತ್ತಿದೆ.
ಜಗತ್ತಿನ ಅತಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಟ್ರಂಪ್ ಪ್ರಮುಖ ಸಮರ್ಥಕರಾಗಿ, ಅವರ ಬೆನ್ನಿಗೆ ನಿಂತಿದ್ದಾರೆ. ಆದರೆ, ಇವರಿಬ್ಬರ ‘ಗೆಳೆತನ’ ಎಷ್ಟು ದಿನ ಮುಂದುವರಿಯಲಿದೆ ಎಂದು ನಿಶ್ಚಿತವಾಗಿಯೂ ಹೇಳಲಾಗದು, ಕಾರಣ ಇಬ್ಬರೂ ಹಠಮಾರಿ ಧೋರಣೆಯವರು. ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಬರುವ ವಸ್ತುಗಳ ಮೇಲೆ ಪಾರಸ್ಪರಿಕ ತೆರಿಗೆ (ರೆಸಿಪ್ರೋಕಲ್ ಟ್ಯಾರಿಫ್) ವಿಧಿಸುವುದನ್ನು ಏಪ್ರಿಲ್ 2ರಿಂದ ಪ್ರಾರಂಭಿಸಲಾಗುವುದು ಎಂದು ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ.
ಕಾಡುತ್ತಿರುವ ಆತಂಕ ಟ್ರಂಪ್ ಅವರ ಆರ್ಥಿಕ ನೀತಿಗಳು ಅಮೆರಿಕದ ಅರ್ಥವ್ಯವಸ್ಥೆಯ ಹಳಿ ತಪ್ಪಿಸಲಿವೆ ಎಂಬ ಆತಂಕ ತಜ್ಞರಿಂದಲೇ ವ್ಯಕ್ತವಾಗಿದೆ. ‘ಅಮೆರಿಕ ಫಸ್ಟ್’ ಎಂಬ ನೀತಿಯೇನೋ ಸರಿ. ಆದರೆ, ಈ ನೀತಿಯ ನೆಪದಲ್ಲಿ ಟ್ರಂಪ್ ಕೆನಡಾ ಮತ್ತು ಮೆಕ್ಸಿಕೋಗಳಂಥ ನೆರೆರಾಷ್ಟ್ರಗಳೊಂದಿಗೆ ಅವಮಾನಕಾರಿಯಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಯುರೋಪಿಯನ್ ರಾಷ್ಟ್ರಗಳು ಕೂಡ ಟ್ರಂಪ್ ಮೇಲಿನ ವಿಶ್ವಾಸ ಕಳೆದುಕೊಂಡಿವೆ ಎನ್ನುತ್ತಾರೆ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು. ದ್ವಿತೀಯ ವಿಶ್ವಯುದ್ಧದ ಬಳಿಕ ಅಮೆರಿಕ ಮತ್ತು ಯುರೋಪ್ ಒಟ್ಟೊಟ್ಟಿಗೆ ಸಾಗಿ ಬಂದಿವೆ. ಆದರೆ, ಇದೇ ಮೊದಲ ಬಾರಿ ಸಂಬಂಧ ಬಿರುಕು ಬಿಟ್ಟಿದ್ದು, ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಿ ಇರಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಾರಸ್ಪರಿಕ ತೆರಿಗೆ ನೀತಿ ಭಾರತಕ್ಕೂ ಅನ್ವಯಿಸುತ್ತದೆ ಎಂದು ಟ್ರಂಪ್ ಹಲವು ಬಾರಿ ಉಚ್ಚರಿಸಿದ್ದಾರೆ ಮತ್ತು ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಭಾರತ ತರಾತುರಿಯ ತೀರ್ಮಾನಕ್ಕೆ ಮುಂದಾಗದೆ ಕಾದುನೋಡುವ ತಂತ್ರಕ್ಕೆ ಮುಂದಾಗಿದೆ. ಟ್ರಂಪ್ ಹೇಳಿದಂತೆ ಸುಂಕ ಹೆಚ್ಚಿಸಿದರೆ, ಭಾರತದ ಉದ್ಯಮ ವಲಯ ಪರ್ಯಾಯ ದಾರಿ ಹುಡುಕಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ, ಮಾತುಕತೆಯ ಮುಖಾಂತರ ‘ಸುಂಕ ಪರಿಷ್ಕರಣೆ’ ದಾರಿಯನ್ನು ಸುಗಮಗೊಳಿಸುವ ಯೋಜನೆ ಭಾರತದ್ದು.
ಒಂದು ವೇಳೆ, ಅಮೆರಿಕವು ಉಕ್ಕು ಮತ್ತು ಅಲ್ಯುಮಿನಿಯಂ ಅಮದಿನ ಮೇಲೆ ಶೇ. 25 ಸುಂಕ ವಿಧಿಸಿದರೆ ಭಾರತದ 1 ಶತಕೋಟಿ ಡಾಲರ್ (ಸುಮಾರು 8700 ಕೋಟಿ ರೂ.) ಮೌಲ್ಯದ ರಫ್ತಿನ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಒಟ್ಟಾರೆ ಉಕ್ಕು ರಫ್ತಿನ ಅಲ್ಪ ಪ್ರಮಾಣ, ಅಂದರೆ ಸುಮಾರು ಶೇ. 5ರಷ್ಟು ಮಾತ್ರ ಅಮೆರಿಕಕ್ಕೆ ಹೋಗುತ್ತದೆ. ಆದರೆ ಅಲ್ಯುಮಿನಿಯಂ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಆಗುತ್ತದೆ. ಭಾರತದ ಒಟ್ಟು ಅಲ್ಯುಮಿನಿಯಂ ರಫ್ತಿನಲ್ಲಿ ಅಮೆರಿಕದ ಪಾಲು ಶೇ. 12ರಷ್ಟಿದೆ. 2024ರ ನವೆಂಬರ್ವರೆಗೆ ಅಮೆರಿಕಕ್ಕೆ ಭಾರತದ ಅಲ್ಯುಮಿನಿಯಂ ರಫ್ತು 777 ದಶಲಕ್ಷ ಡಾಲರ್ನಷ್ಟಿತ್ತು. ಇದು ದೇಶದ ಒಟ್ಟಾರೆ ಅಲ್ಯುಮಿನಿಯಂ ರಫ್ತಿನ (6.7 ಟ್ರಿಲಿಯನ್ ಡಾಲರ್) ಶೇ. 11.5ರಷ್ಟಾಗಿದೆ.
ಈ ಬೆಳವಣಿಗೆಯ ಲಾಭವನ್ನು ಪಡೆದುಕೊಳ್ಳಲು ಚೀನಾ ಸಜ್ಜಾಗಿದೆ. ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಕಡಿತಗೊಳಿಸುವ ಅಥವಾ ವ್ಯಾಪಾರ ಪ್ರಮಾಣವನ್ನು ಕಡಿಮೆಗೊಳಿಸುವ ರಾಷ್ಟ್ರಗಳೊಂದಿಗೆ ಸ್ನೇಹ ಸಂಪಾದಿಸಿ, ಹೂಡಿಕೆ ಹೆಚ್ಚಿಸಿಕೊಳ್ಳಲು ಅದು ಮುಂದಾಗಿದೆ. ಅಲ್ಲದೆ, ಅಮೆರಿಕ ವಿಧಿಸಿರುವ ಶೇ.10 ಹೆಚ್ಚುವರಿ ತೆರಿಗೆಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆನಡಾ ಮೇಲೆ ಶೇಕಡ 25 ಪಾರಸ್ಪರಿಕ ತೆರಿಗೆ ವಿಧಿಸುವ ನಿರ್ಣಯವನ್ನು ಫೆಬ್ರವರಿ ಮತ್ತು ಮಾರ್ಚ್ ಅವಧಿಯಲ್ಲೇ ಎರಡು ಬಾರಿ ಕೈಗೊಂಡು, ಅದನ್ನು ಮತ್ತೆ ಮಾರ್ಚ್ 6ರಂದು ಒಂದು ತಿಂಗಳ ಮಟ್ಟಿಗೆ ಮುಂದೂಡಿದ್ದಾರೆ ಟ್ರಂಪ್. ಪದೇಪದೆ ಬದಲಾಗುತ್ತಿರುವ ಅಮೆರಿಕದ ಧೋರಣೆಗೆ ಕೆನಡಾ ಸರ್ಕಾರ ತನ್ನದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದು, ‘ನಾವು ಯಾವುದೇ ಒತ್ತಡಕ್ಕೂ ಬಗ್ಗುವುದಿಲ್ಲ. ಅಮೆರಿಕ ಎಷ್ಟು ಸುಂಕ ವಿಧಿಸುತ್ತದೆಯೋ ನಾವು (ಕೆನಡಾ) ಕೂಡ ಅಮೆರಿಕ ಉತ್ಪನ್ನಗಳ ಮೇಲೆ ಅಷ್ಟೇ ತೆರಿಗೆಯನ್ನು ವಿಧಿಸುತ್ತೇವೆ’ ಎಂದಿದೆ. ಕೆನಡಾದ ಜನಸಾಮಾನ್ಯರು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಾಗಾಗಿಯೇ, ಕೆನಡಾದ 63% ಜನರು ಸ್ಟೋರ್ಗಳಿಂದ ಅಮೆರಿಕದ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸಿದ್ದಾರೆ.
50% ಜನರು ಅಮೆರಿಕ ಫಾಸ್ಟ್ಫೂಡ್ ಮಳಿಗೆಗಳಿಂದ ದೂರ ಸರಿದಿದ್ದಾರೆ. ಕೆನಡಾದ 30% ಜನರು ಅಮೆರಿಕದಲ್ಲಿ ರಜೆಗಳು ಕಳೆಯುವ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ಅಷ್ಟೇ ಅಲ್ಲ, ಅಮೆರಿಕನ್ ಟೊಮ್ಯಾಟೊಗಳ ಖರೀದಿಯನ್ನು ನಿಲ್ಲಿಸಿದ್ದು, ಇಟಲಿಯಿಂದ ಟೊಮ್ಯಾಟೊ ತರಿಸಿಕೊಳ್ಳುತ್ತಿದ್ದಾರೆ. ಸೇಬಿನ ವಿಚಾರದಲ್ಲೂ ಕೆನಡಿಯನ್ನರೂ ಇದೇ ರೀತಿಯ ನಿರ್ಧಾರ ತಳೆದಿದ್ದಾರೆ. ಮಳಿಗೆಗಳಲ್ಲಿ ಮಾರಾಟಗಾರರು ಅಮೆರಿಕನ್ ಉತ್ಪನ್ನಗಳ ಮಾರಾಟವನ್ನು ಕೈಬಿಟ್ಟಿದ್ದು, ಕೆನಡಾದ ಉತ್ಪನ್ನಗಳನ್ನಷ್ಟೇ ಮಾರಾಟ ಮಾಡುತ್ತಿದ್ದಾರೆ. ಕೆನಡಾದ ಜನರಲ್ಲೂ ಈಗ ಅಮೆರಿಕದ ಬಗ್ಗೆ ಅಸಮಾಧಾನದ ಭಾವನೆ ಸ್ಪಷ್ಟವಾಗಿ ಕಂಡುಬರುತ್ತಿದೆ. ‘ಅಮೆರಿಕದೊಂದಿಗೆ ಕೆನಡಾ ಉತ್ತಮ ಸಂಬಂಧ ಕಾಯ್ದುಕೊಂಡು ಬಂದಿದೆ. ಆದರೆ, ಪಾರಸ್ಪರಿಕ ತೆರಿಗೆ ಮುಖಾಂತರ ಟ್ರಂಪ್ ವಿಶ್ವಾಸಘಾತ ಎಸಗಿದ್ದಾರೆ.
ಹೀಗಿರುವಾಗ ನಮಗೇಕೆ ಅವರ (ಅಮೆರಿಕ) ರಾಷ್ಟ್ರದ ಉತ್ಪನ್ನಗಳು ಬೇಕು? ನಾವು ಬೇರೆ ಆಯ್ಕೆಗಳನ್ನು ಕಂಡುಕೊಳ್ಳುತ್ತೇವೆ’ ಎಂಬ ಜನರ ದನಿಯನ್ನೇ ಸರ್ಕಾರದಲ್ಲಿ ಇರುವವರು ಪುನರುಚ್ಚರಿಸುತ್ತಿದ್ದಾರೆ. ದಿಢೀರ್ ಸುಂಕ ಹೆಚ್ಚಳದ ನಿರ್ಧಾರವನ್ನು ವಿರೋಧಿಸಿ ಕೆನಡಾ ವಿಶ್ವ ವ್ಯಾಪಾರ ಸಂಸ್ಥೆಗೆ (ಡಬ್ಲ್ಯುಟಿಒ) ದೂರು ದಾಖಲಿಸಿದೆ. ಕೆನಡಾ ಮೇಲಿನ ನ್ಯಾಯಸಮ್ಮತವಲ್ಲದ ಸುಂಕಗಳಿಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರದೊಂದಿಗೆ ಡಬ್ಲ್ಯುಟಿಒ ಸಮಾಲೋಚನೆ ನಡೆಸಬೇಕು ಎಂದು ಅದು ಕೋರಿದೆ.