ರಾಜ್ಯದಲ್ಲೂ ಸಿಗುತ್ತಾ ಶಾಲಾ ಶುಲ್ಕದಿಂದ ವಿನಾಯ್ತಿ? ದೆಹಲಿ, ಬಿಹಾರ, ಹರಿಯಾಣದಲ್ಲಾಗಿರೋದೇನು?

School fees
Published on

ಬೆಂಗಳೂರು: ಲಾಕ್​ಡೌನ್​ ತೆರವಾಗುತ್ತಿದ್ದಂತೆ ಪಾಲಕರಿಗೆ ಎದುರಾಗುವ ಬಹುದೊಡ್ಡ ಪ್ರಶ್ನೆ ಎಂದರೆ ಮಕ್ಕಳನ್ನು ಸ್ಕೂಲ್​ಗೆ ಸೇರಿಸುವುದು ಹೇಗೆ? ಎಂಬುದು. ರಾಜ್ಯದಲ್ಲಿ ಶಾಲಾ ಪ್ರವೇಶ ಪ್ರಕ್ರಿಯೆಗಳನ್ನು ಮುಂದಿನ ಆದೇಶದವರೆಗೆ ಕೈಗೊಳ್ಳುವಂತಿಲ್ಲ ಎಂದು ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಆದರೂ, ಆಡಳಿತ ಮಂಡಳಿಗಳು ಮಕ್ಕಳಿಗೆ ಮುಂದಿನ ತರಗತಿಯಲ್ಲಿ ಸೀಟು ಖಚಿತಪಡಿಸಿಕೊಳ್ಳಲು ಶುಲ್ಕ ಪಾವತಿಸಿ ಎಂಬ ಸಂದೇಶಗಳನ್ನು ಕಳುಹಿಸುತ್ತಿವೆ ಎಂಬುದು ಪಾಲಕರ ಆರೋಪ.

ಲಾಕ್​ಡೌನ್ ಮತ್ತೆ ವಿಸ್ತರಣೆ ಆಗಿರುವುದರಿಂದ ಜನರು ಕೆಲಸಕ್ಕೆ ತೆರಳಲು ಆಗುತ್ತಿಲ್ಲ. ಆದಾಯ ಕುಸಿತದ ಸಂಕಷ್ಟ ಎದುರಾಗಿದೆ. ಹಲವರು ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಮಕ್ಕಳ ಶಾಲಾ ಶುಲ್ಕ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ ಎಂಬುದು ಪಾಲಕರ ಕಳವಳ. ಈ ಕಾರಣಕ್ಕಾಗಿಯೇ ಶುಲ್ಕ ವಿನಾಯ್ತಿ ಘೋಷಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಈ ಬೇಡಿಕೆಗೆ ಸ್ಪಂದನೆ ವ್ಯಕ್ತವಾಗಿದೆ.

ದೆಹಲಿಯಲ್ಲಿ ಲಾಕ್​ಡೌನ್​ ಅವಧಿಗೆ ಮಕ್ಕಳ ಟ್ಯೂಷನ್​ ಶುಲ್ಕ ಮಾತ್ರ ಪಡೆಯಬೇಕು. ಸಾರಿಗೆ ವೆಚ್ಚ ಅಥವಾ ಇನ್ನಾವುದೇ ಶುಲ್ಕ ಪಡೆಯುವಂತಿಲ್ಲ. ಸರ್ಕಾರವೇ ಆದೇಶ ಹೊರಡಿಸಿದೆ. ಸರ್ಕಾರದ ಅನುಮತಿ ಇಲ್ಲದೇ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಲಾಗಿದೆ.

ಹರಿಯಾಣದಲ್ಲೂ ಮೂರು ತಿಂಗಳ ಶುಲ್ಕದಿಂದ ಮಕ್ಕಳಿಗೆ ವಿನಾಯ್ತಿ ನೀಡಬೇಕು ಎಂದು ಖಾಸಗಿ ಶಾಲೆಗಳಿಗೆ ಸೂಚಿಸಲಾಗಿದೆ. ಜತೆಗೆ, ಶುಲ್ಕ ಪಾವತಿಸಲು ಸಾಕಷ್ಟು ಕಾಲಾವಕಾಶ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.

ಇದೀಗ ಬಿಹಾರದಲ್ಲಿ, ಖಾಸಗಿ ಶಾಲೆಗಳು ಮಾರ್ಚ್​ ಹಾಗೂ ಏಪ್ರಿಲ್​ನ ಟ್ಯೂಷನ್​ ಶುಲ್ಕವನ್ನು ಪಡೆಯಬಾರದು. ಸಾರಿಗೆ ಅಥವಾ ಇನ್ನಾವುದೇ ವೆಚ್ಚವನ್ನು ಪಾಲಕರಿಂದ ಸಂಗ್ರಹಿಸಬಾರದೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿಳಿಸಿದೆ. ಮಾನವೀಯತೆ ಆಧಾರದಲ್ಲಿ ವಿನಾಯ್ತಿಗೆ ಮುಂದಾಗಬೇಕು ಎಂದು ಹೇಳಿದೆ.

ಇದೆಲ್ಲದರ ನಡುವೆ, ಕೇಂದ್ರ ಸರ್ಕಾರ ಕೂಡ ಕೆಲ ನಿರ್ದೇಶನಗಳನ್ನು ನೀಡಿದೆ. ಶಾಲಾ ಶುಲ್ಕವನ್ನು ಹೆಚ್ಚಿಸುವಂತಿಲ್ಲ, ಮೂರು ತಿಂಗಳ ಶುಲ್ಕವನ್ನು ಒಂದೇ ಬಾರಿ ಪಡೆಯಬೇಡಿ ಎಂದು ಖಾಸಗಿ ಶಾಲೆಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ಈಗಾಗಲೇ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರ ಹಿತವನ್ನು ಕಾಪಾಡಲು ರಾಜ್ಯ ಸರ್ಕಾರಗಳು ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತಕತೆಗೆ ಮುಂದಾಗಲಿ ಎಂದು ತಿಳಿಸಿದ್ದಾರೆ.

ಆದರೆ, ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಹಿತ ಕಾಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net