

ಬೆಂಗಳೂರು: 10ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದ ಒಂದೇ ಶಾಲೆಯಲ್ಲಿ ಸೇರಿಸಿ ವಿಷಯವಾರು ಬೋಧನಾ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಯೋಜನಾ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಈ ಶಿಫಾರಸು ಸರ್ಕಾರಿ ಶಾಲೆಗಳನ್ನು ಮುಚ್ಚುವ ಆತಂಕವನ್ನು ಮತ್ತೊಮ್ಮೆ ತಂದೊಡ್ಡಿದೆ.
ಗುಣಮಟ್ಟದ ಶಿಕ್ಷಣಕ್ಕೆ ವಿಷಯವಾರು ಬೋಧನೆ ಅವಶ್ಯ. 8-10 ವಿದ್ಯಾರ್ಥಿಗಳಿಗೆ ವಿಷಯವಾರು ಬೋಧಕರ ನೇಮಕ ಕಷ್ಟ. ಹಾಗಾಗಿ ಈ ಮಕ್ಕಳನ್ನು ಒಂದೆಡೆ ಸೇರಿಸಿದರೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯ. ಇಂತಹ ಶಾಲೆಗಳ ಮಕ್ಕಳ ಪಾಲಕರಿಗೆ ಹೊರೆಯಾಗದಂತೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲು ಕೂಡ ಶಿಫಾರಸು ಮಾಡಲಾಗಿದೆ. ಈ ವಿಚಾರದಲ್ಲಿ ಮಂಡಳಿ ಚರ್ಚೆ ಹಾಗೂ ಸಲಹೆಗೆ ಮುಕ್ತ ಮನಸ್ಸು ಹೊಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದರು.
ಗುಣಮಟ್ಟದ ಶಿಕ್ಷಣದಲ್ಲಿ 2018-19ರಲ್ಲಿ ದೇಶದಲ್ಲಿ 4ನೇ ಸ್ಥಾನ ಗಳಿಸಿದ್ದ ರಾಜ್ಯ 2019-20ನೇ ಸಾಲಿನಲ್ಲಿ 7ನೇ ಸ್ಥಾನಕ್ಕೆ ಇಳಿದಿದೆ. ಹಾಗಾಗಿ ಈ ಸಲಹೆ ನೀಡಲಾಗಿದೆ ಎಂದರು. ಸುಸ್ಥಿರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಕೇರಳ, ದೆಹಲಿ, ತಮಿಳುನಾಡು, ಗುಜರಾತ್ನಲ್ಲಿ ಅಧ್ಯಯನ ಪ್ರವಾಸ ಹಮ್ಮಿಕೊಳ್ಳುವುದಾಗಿಯೂ ಮಾಹಿತಿ ನೀಡಿದರು.
ಬದಲಾವಣೆ ಸೂಚನೆ: ಬಡವರ ಬಂಧು- ಯೋಜನೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ. ನಿತ್ಯ ವಸೂಲಿ ಮಾಡುವ ಬದಲು ಪ್ರತಿ ಮೂರು ತಿಂಗಳಿಗೊಮ್ಮೆ ಸಾಲ ವಾಪಸ್ ಪಡೆಯಬೇಕು. ಸರಿಯಾಗಿ ಮರು ಪಾವತಿ ಮಾಡಿದವರಿಗೆ ಮುಂದಿನ ಬಾರಿ ಶೇ.10 ಹೆಚ್ಚಿನ ಸಾಲ ನೀಡಬೇಕು. ಆಧಾರ್ ಹಾಗೂ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸಬೇಕು. ಇದನ್ನು ಎಲ್ಲ ನಗರ ಹಾಗೂ ಹೋಬಳಿ ಮಟ್ಟದ ಬೀದಿ ಬದಿ ವ್ಯಾಪಾರಿಗಳಿಗೂ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ ಎಂದರು.
ಏಕಗವಾಕ್ಷಿ ಸೌಲಭ್ಯ: ಸಾರ್ವಜನಿಕರಿಗೆ ಸರ್ಕಾರದ ವಿವಿಧ ಸೌಲಭ್ಯ ಕಲ್ಪಿಸಲು ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸುವ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸುವಂತೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ರಾಜ್ಯ 6ನೇ ಸ್ಥಾನದಲ್ಲಿದ್ದು, ಇದನ್ನು 2 ರಿಂದ 3ಕ್ಕೆ ಏರಿಸಲು ಪೂರಕ ಯೋಜನೆ ಹಾಗೂ ಕಾರ್ಯತಂತ್ರಗಳನ್ನು ಮಂಡಳಿ ರೂಪಿಸಿದ್ದು, ಅವುಗಳ ಜಾರಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ವಿಶೇಷ ಆದ್ಯತೆಗೆ ಶಿಫಾರಸು: ಕೇಂದ್ರದ ನೀತಿ ಆಯೋಗದ ವರದಿ ಪ್ರಕಾರ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು 14 ಮತ್ತು 13ನೇ ಪಡೆದುಕೊಂಡಿವೆ. ಈ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ
ಅನುದಾನ ಮೀಸಲಿಟ್ಟು ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸುವುದಾಗಿ ತಿಳಿಸಿದರು.
ವಿಷನ್ 2020 ಗುರಿಗಳು
ಗ್ರಾಮೀಣ ಬಡತನ ಮಟ್ಟ ಪ್ರಸ್ತುತ 20.91ರಷ್ಟಿದ್ದು, ಶೇ.10ಕ್ಕಿಂತ ಕಡಿಮೆ ಮಾಡುವುದು, ಭತ್ತ, ಗೋಧಿ, ಧಾನ್ಯಗಳ ವಾರ್ಷಿಕ ಉತ್ಪನ್ನ ಹೆಕ್ಟೇರ್ಗೆ 1731 ಕೇಜಿ ಇದ್ದು, ಇದನ್ನು 3,500 ಕೇಜಿಗೆ ಹೆಚ್ಚಿಸುವುದು, ಸಾಕ್ಷರತಾ ದರ ಗ್ರಾಮೀಣ ಪ್ರದೇಶದಲ್ಲಿ ಶೇ.68.86 , ನಗರ ಪ್ರದೇಶದಲ್ಲಿ 81.21 ಇದ್ದು, ಇದನ್ನು ಶೇ.100ಕ್ಕೆ ಹೆಚ್ಚಿಸುವುದು, ಕೌಶಲ್ಯಾಭಿವೃದ್ಧಿ ತರಬೇತಿ ಶೇ.70 ರಷ್ಟಿದ್ದು, ಶೇ.100ಕ್ಕೆ ಏರಿಸುವುದು, ಪರಿವರ್ತನಾ ಅವಧಿಯಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಶಾಲೆ ತೊರೆದವರ ದರ ಶೇ.26.18 ರಷ್ಟಿದ್ದು, ಅದನ್ನು ಶೂನ್ಯಕ್ಕೆ ಇಳಿಸುವುದು ಸೇರಿಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ ಸಲಹೆ, ಸೂಚನೆ ನೀಡಲಾಗುವುದು ಎಂದು ಪುಟ್ಟಸ್ವಾಮಿ ತಿಳಿಸಿದರು.