

ಮುಂಬೈ: ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ವಿವಾಹವಾಗಲಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ವಿವಾಹದ ಅದ್ಧೂರಿ ಆಚರಣೆಗಳು ಆರಂಭವಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹೈಲೈಟ್ ಆಗಿದೆ. ಸಮಾರಂಭದ ಫೋಟೋ ಮತ್ತು ವೀಡಿಯೊಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿವೆ.
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿರುವ ಈ ವಿವಾಹ ಸಮಾರಂಭ ಅದ್ಧೂರಿ ಆಚರಣೆ ಮತ್ತು ಉನ್ನತ ವಿಐಪಿ ಅತಿಥಿ ಪಟ್ಟಿಯಿಂದಾಗಿ ಈಗಾಗಲೇ ಸುದ್ದಿಯಲ್ಲಿದೆ. ಈ ಹೈಪ್ರೊಫೈಲ್ ಮದುವೆಗೆ ದೇಶ ವಿದೇಶಗಳಿಂದ ಅನೇಕ ಅತಿಥಿಗಳು ಆಗಮಿಸುತ್ತಿದ್ದಾರೆ. ಅಮೆರಿಕದ ರಿಯಾಲಿಟಿ ಶೋ ತಾರೆ ಕಿಮ್ ಕಾರ್ಡಶಿಯಾನ್, ಮಾಜಿ ಬಾಕ್ಸಿಂಗ್ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ಹಾಗೂ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತುಬೋರಿಸ್ ಜಾನ್ಸನ್ ಅವರ ಹೆಸರುಗಳನ್ನು ಈ ಪಟ್ಟಿಯಲ್ಲಿ ನಿರೀಕ್ಷಿಸಲಾಗಿದೆ.
ಇನ್ನೂ ಭಾರತೀಯ ಸಿನಿಮಾ ರಂಗದ ಸೆಲಬ್ರಿಟಿಗಳು ಈ ಮದುವೆಯಲ್ಲಿ ಭಾಗಿಯಾಗುವ ಬಗ್ಗೆ ಒಂದೊಂದೆ ಮಾಹಿತಿ ಹೊರಬರುತ್ತಿದೆ. ರಾಜಕೀಯ ವಲಯದಿಂದ ವಿವಾಹದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಮದುವೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಮೋದಿ ದಂಪತಿಯನ್ನು ಆಶೀರ್ವದಿಸಿ ತೆರಳಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ವಿಚಾರ ಪ್ರಧಾನಿ ಕಚೇರಿಯಿಂದ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಅಷ್ಟಕ್ಕೂ ಪ್ರಧಾನಿ ಮೋದಿ ಅವರು ಮುಖೇಶ್ ಅಂಬಾನಿ ಕಿರಿಯ ಪುತ್ರನ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹರಡಲು ಕಾರಣವಾಗಿದ್ದು ಆ ಪೋಸ್ಟರ್. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ನಡೆಯುವ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ಗೆ ಹೋಗುವ ರಸ್ತೆಯಲ್ಲಿ ಮೋದಿ ಅವರ ಪೋಸ್ಟರ್ಗಳು ಎಲ್ಲರ ಗಮನ ಸೆಳೆದಿವೆ. ಪ್ರಧಾನಿ ಮೋದಿ ಅವರ ನೇತೃತ್ವದ ಪೋಸ್ಟರ್ಗಳನ್ನು ಬಿಜೆಪಿಯವರೇ ಹಾಕಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಹಾಕಲಾದ ಈ ಪೋಸ್ಟರ್‌ಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಂಬೈಗೆ ಹೃತ್ಪೂರ್ವಕ ಸ್ವಾಗತ ಎಂದು ಬರೆಯಲಾಗಿದೆ. (ಏಜೆನ್ಸೀಸ್)