

ಶಿವಮೊಗ್ಗ: ನಟ ಶಿವರಾಜ್‌ಕುಮಾರ್ ಪತ್ನಿ, ಗೀತಾ ಶಿವರಾಜ್‌ಕುಮಾರ್ ಇನ್ಮುಂದೆ ಯಾವುದೇ ರೀತಿಯ ಚುನಾವಣೆಗೆ(Elections) ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿ ಘೋಷಿಸಿದರು.
ನಗರದ ಬಂಜಾರ ಭವನದಲ್ಲಿ ಶನಿವಾರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಾನಿನ್ನು ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡದಿದ್ದರೂ ಪಕ್ಷ ಸಂಘಟನೆಯಲ್ಲಿ ಸದಾ ಜತೆಗಿರುತ್ತೇನೆ. ನಿಮ್ಮೊಂದಿಗೆ ಕೆಲಸ ಮಾಡುತ್ತೇನೆ. ಯಾವಾಗ ಕರೆದರೂ ನಾನು ಬರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಶ್ವೇತಾ ಬಂಡಿ ಅವರನ್ನು ಅಭಿನಂದಿಸಿ, ತಮ್ಮ ಚುನಾವಣೆಯ ಪ್ರಚಾರದಲ್ಲಿ ಅವರು ಶ್ರಮಿಸಿದ್ದಾರೆ. ಇಂದಿನ ಸಮಾವೇಶ ನನಗೆ ವೈಯಕ್ತಿಯವಾಗಿಯೂ ಖುಷಿ ತಂದಿದೆ. ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬುದಕ್ಕೆ ಇಂದಿನ ವೇದಿಕೆ ಸಾಕ್ಷಿಯಾಗಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟಿಸುವ ಶಕ್ತಿ ಶ್ವೇತಾ ಬಂಡಿ ಅವರಿಗಿದೆ ಎಂದು ಹೇಳಿದರು.