Bihar Election | ನಿತೀಶ್ ಕುಮಾರ್​ ನೇತೃತ್ವದಲ್ಲಿಯೇ ಚುನಾವಣೆ, ಆದರೆ ಸಿಎಂ ಆಯ್ಕೆ...

Amit Shah 26
Published on

Patna: ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ಸಂಬಂಧಪಟ್ಟಂತೆ ಸೀಟು ಹಂಚಿಕೆಯ ವಿಷಯವಾಗಿ ಎನ್‌ಡಿಎಯಲ್ಲಿ ಯಾವುದೇ ಅಸಮಧಾನ ಇಲ್ಲ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ನಿತೀಶ್ ಕುಮಾರ್ ನೇತೃತ್ವದಲ್ಲಿ ಮೈತ್ರಿಕೂಟ ಚುನಾವಣೆ ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು.

ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡಿದ ಷಾ, ಚುನಾವಣೆಯ ನಂತರ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ವ್ಯಕ್ತಿ ನಾನಲ್ಲ. ಆದರೆ ನಾವು ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ಅದಾದ ಬಳಿಕ ಎಲ್ಲಾ ಮಿತ್ರಪಕ್ಷಗಳು ಒಟ್ಟಾಗಿ ಕುಳಿತು ತಮ್ಮ ನಾಯಕನನ್ನು ನಿರ್ಧರಿಸುತ್ತವೆ ಎಂದು ಹೇಳಿದರು.

2020 ರ ವಿಧಾನಸಭಾ ಚುನಾವಣೆಯ ನಂತರ, ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪರ್ಕಿಸಿ, ರಾಜ್ಯದಲ್ಲಿ ಬಿಜೆಪಿ ಜೆಡಿಯುಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದಿರುವುದರಿಂದ, ನ್ಯಾಯಯುತವಾಗಿ ನಿಮ್ಮವರೆ ಮುಖ್ಯಮಂತ್ರಿಯಾಗಬೇಕೆಂದು ಹೇಳಿದ್ದರು ಎನ್ನುವ ಮೂಲಕ ಕಳೆದ ಐದು ವರ್ಷದ ಹಿಂದಿನ ಗುಟ್ಟನ್ನು ರಟ್ಟು ಮಾಡಿದರು. ನಾವು ಯಾವಾಗಲೂ ನಮ್ಮ ಮೈತ್ರಿಯನ್ನು ಗೌರವಿಸುತ್ತಿದ್ದೆವು, ನಿತೀಶ್ ರಾಜ್ಯದ್ಯಂತ ಗಳಿಸಿರುವ ಗೌರವ ಮತ್ತು ಅವರ ಹಿರಿತನದ ಆಧಾರದ ಮೇಲೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು ಎಂದು ತಿಳಿಸಿದರು.

ನಿತೀಶ್ ಕುಮಾರ್ ಅವರ ದುರ್ಬಲ ಆರೋಗ್ಯ ಮತ್ತು ನಡವಳಿಕೆಯ ಬಗ್ಗೆ ಪ್ರತಿಪಕ್ಷಗಳ ಆರೋಪಗಳಿಗೆ ಸ್ಪಷ್ಟನೆ ನೀಡಿದ ಅಮಿತ್ ಷಾ, ಅವರೊಂದಿಗಿನ ಭೇಟಿ ಮತ್ತು ಫೋನ್ ಸಂಭಾಷಣೆಯಲ್ಲಿ ಈ ರೀತಿಯ ಯಾವ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿಲ್ಲ. ವೃದ್ಧಾಪ್ಯದ ಕಾರಣದಿಂದಾಗಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು, ಆದರೆ, ಮುಖ್ಯಮಂತ್ರಿ ಮಾತ್ರವಲ್ಲ ಇಡೀ ತಂಡ ಅವರೊಂದಿಗೆ ರಾಜ್ಯದ ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net