

ಜೀನೆವಾ: ಕೆಲ ವಾರಗಳ ಹಿಂದೆ ಭಾರತದ ನೆರೆ ದೇಶ ನೇಪಾಳದಲ್ಲಿ ಭಾರೀ ಪ್ರವಾಹ ಉಂಟಾಗಿ ಸಾವಿರಾರು ಜನ ಮೃತಪಟ್ಟಿದ್ದ ಘಟನೆ ವರದಿಯಾಗಿತ್ತು. ಈ ಸಮಯದಲ್ಲಿ ಭಾರತ ಸೇರಿದಂತೆ ಇನ್ನೂ ಅನೇಕ ದೇಶಗಳು ನೇಪಾಳಕ್ಕೆ ಬೆಂಬಲ ಸೂಚಿಸಿ ಸಹಾಯ ಹಸ್ತವನ್ನು ಚಾಚಿದ್ದವು.
ಈಗ ಜೀನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ನೇಪಾಳ ಪ್ರಧಾನಿ ಬಾಲೇನ್ ಶಾ (Balen Shah), ಕೆಲ ಸಮಯದ ಹಿಂದೆ ನಮ್ಮ ದೇಶ ನೈಸರ್ಗಿಕ ವಿಪತ್ತಿಗೆ ತುತ್ತಾಗಿದ್ದ ಸಂದರ್ಭದಲ್ಲಿ ಭಾರತ ಹಾಗೂ ಚೀನಾ ಮಾಡಿರುವ ಸಹಾಯವನ್ನು ನಾನು ಮತ್ತು ನನ್ನ ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಆರಂಭಿಸಿದ ಬಾಲೇನ್ ಶಾ, ಹಿಂದೂ ಖುಷ್ ಹಿಮಾಲತಯದ ಶ್ರೇಣಿಗಳು ಹೆಚ್ಚು ಕಡಿಮೆ 200 ಕೋಟಿ ಜನರ ವಾಸಸ್ಥಾನವಾಗಿದೆ. ಇಲ್ಲಿಯ ಪರ್ವತಗಳು, ಇಲ್ಲಿಯ ಜನರಿಗೆ ನೀರು, ವ್ಯವಸಾಯಕ್ಕೆ ಭೂಮಿ ಹಾಗೂ ಬದುಕಲು ಆರೋಗ್ಯಕರ ಪರಿಸರವನ್ನು ನಿರ್ಮಿಸಿಕೊಟ್ಟಿದೆ.
ಆದರೆ, ಕಳೆದ ಕೆಲ ದಶಕಗಳಿಂದ ಈ ಪ್ರದೇಶದಲ್ಲಿ ಹವಾಮಾನ ವೈಪರಿತ್ಯ ಕಂಡುಬರುತ್ತಿದ್ದು, ಪ್ರಕೃತಿ ವಿಕೋಪ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಪರಿಸರದ ರಕ್ಷಣೆ ಎನ್ನುವುದು ನೇಪಾಳ ಸೇರಿದಂತೆ ಭಾರತ ಹಾಗೂ ಚೀನಾ ದೇಶಗಳ ಜವಾಬ್ದಾರಿಯಾಗಿದ್ದು, ನಮ್ಮ ಮುಂದಿನ ಪೀಳಿಗೆಯ ರಕ್ಷಣೆಗಾಗಿ ನಾವು ಮೂರು ದೇಶಗಳು ಒಂದಾಗಿ, ಪರಿಸರ ರಕ್ಷಣೆ ಸಂಬಂಧಿ ಮ್ರೈತಿಕೂಟವನ್ನು ಮಾಡಿಕೊಳ್ಳಬೇಕೆಂದು ಬಾಲೇನ್ ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಆಗಸ್ಟ್ನಲ್ಲಿ ಪ್ರವಾಹಕ್ಕೆ ನಮ್ಮ ದೇಶ ತುತ್ತಾಗಿರಬಹುದು, ಆದರೆ ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಕೃತಿ ವಿಕೋಪಗಳು ಗಡಿಯನ್ನು, ದೇಶವನ್ನು ನೋಡಿ ಸಂಭವಿಸುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ವಿಕೋಪಗಳ ತೀವ್ರತೆಯನ್ನು ತಡೆಯುವತ್ತ ನಾವು ಗಮನ ಹರಿಸಬೇಕೆಂದು ಬಾಲೇನ್ ಶಾ, ಆಗ್ರಹಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ನೇಪಾಳದಲ್ಲಿ ಭಾರಿ ಪ್ರವಾಹ ಸಂಭವಿಸಿದ ಹಿನ್ನಲೆ, ಸುಮಾರು 1,400 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರೆ 6,000 ಕ್ಕೂ ಹೆಚ್ಚಿನ ಜನರು ಕಣ್ಮರೆಯಾಗಿದ್ದರು. ಹಿಮ ಪರ್ವತಗಳು ಕರಗಿದ್ದು, ಈ ಪ್ರವಾಹಕ್ಕೆ ಕಾರಣವೆಂದು ಅಂದಾಜಿಸಲಾಗಿದ್ದು, ರಸ್ತೆ, ಸೇತುವೆ ಸೇರಿದಂತೆ ಕೋಟ್ಯಾಂತರ ರೂಪಾಯಿಗಳ ಆಸ್ತಿ-ಪಾಸ್ತಿಗಳು ನಾಶವಾಗಿದ್ದವು.
ಈ ಸಂದರ್ಭದಲ್ಲಿ ಭಾರತವು ಸುಮಾರು 140 ಟನ್ ಆಹಾರ ಹಾಗೂ ವೈಧ್ಯಕೀಯ ಸೌಲಭ್ಯಗಳನ್ನು ನೇಪಾಳಕ್ಕೆ ಮಾನವೀಯತೆ ದೃಷ್ಟಿಯಲ್ಲಿ ನೆರವನ್ನು ನೀಡಿತ್ತು. ಜೊತೆಗೆ ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ಹೊರತೆಗೆಯಲು ಮಾನವ ಸಂಪನ್ಮೂಲವನ್ನು ಒದಗಿಸಿತ್ತು. ಅಂತೆಯೇ, ಚೀನಾ ಕೂಡ ನೇಪಾಳದ ನೆರವಿಗೆ ದಾವಿಸಿ 2.2 ಮಿಲಿಯನ್ ಡಾಲರ್ಗಳಷ್ಟು ಹಣದ ಸಹಾಯವನ್ನು ನೀಡಿತ್ತು, (ಏಜೆನ್ಸೀಸ್).