

ಮಂಡ್ಯ: ಸಚಿವ ನಾರಾಯಣಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತು ಹರಿದಾಡುತ್ತಿದ್ದು ಇದೀಗ ಅವರ ನಿಗೂಢ ನಡೆಯಿಂದ ಕಾಂಗ್ರೆಸ್, ಬಿಜೆಪಿಯಲ್ಲಿ ಗೊಂದಲ ಎದ್ದಿದೆ.
ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನಿಸದೇ ಇದ್ದು ಪಕ್ಷ ಬಿಡುತ್ತಾರೊ, ಉಳಿಯುತ್ತಾರೊ ಎಂಬ ಗೊಂದಲದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಈ ನಡುವೆ ನಾರಾಯಣಗೌಡ ಬಿಜೆಪಿಯವರು ಕೇಳಿದ್ರೆ ನಾನು ಪಕ್ಷ ಬಿಡಲ್ಲ ಎನ್ನುತ್ತಿದ್ದಾರೆ.
ಮತ್ತೊಂದು ಕಡೆ ಕಾಂಗ್ರೆಸ್ ಸೇರುತ್ತಾರೆ ಎಂದು ಮಂಡ್ಯದ ಕೈ ನಾಯಕರು ಹೇಳುತ್ತಿದ್ದು ನಾರಾಯಣಗೌಡ ನಿಗೂಢ ನಡೆಯಿಂದಾಗಿ ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಮಂಕಾಗಿದೆ. ಯಾವುದೇ ಚಟುವಟಿಕೆಗಳಿಲ್ಲದೆ ಕಾರ್ಯಕರ್ತರಲ್ಲಿ ಕುಂದಿದ ಹುಮ್ಮಸ್ಸು. ಇದರಿಂದಾಗಿ ಬಂಡವಾಳ ಹಾಕಿ ಪಕ್ಷ ಸಂಘಟನೆ ಚುರುಕುಗೊಳಿಸುಲು ಕೈ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ. ನಾರಾಯಣಗೌಡಗೆ ಟಿಕೆಟ್ ಕೊಡೋದಾದ್ರೆ ನಾವೇಕೆ ಹಣ ಖರ್ಚು ಮಾಡಬೇಕು ಎಂದು ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್ ನಾಯಕರು ಹಿಂದೇಟು ಹಾಕಿದ್ದಾರೆ.
ಈ ನಡುವೆ ಪರ್ಯಾಯ ಅಭ್ಯರ್ಥಿ ಹುಡುಕಬೇಕಾ ಬೇಡವಾ ಎಂಬ ಅತಂತ್ರ ಸ್ಥಿತಿಯಲ್ಲಿ ಕಮಲ ಪಡೆ ಇದೆ. ಇದೀಗ ನಾರಾಯಣಗೌಡ ನಿರ್ಧಾರಕ್ಕಾಗಿ ಜೆಡಿಎಸ್ ಬಂಡಾಯ ಗುಂಪು ಕಾಯುತ್ತಿದೆ. ನಾರಾಯಣಗೌಡ ನಡೆ ಆಧರಿಸಿ ಮುಂದಿನ ತೀರ್ಮಾನ ಮಾಡಲು ಜೆಡಿಎಸ್ ವಿರುದ್ಧ ಬಂಡೆದ್ದಿರುವ ಮುಖಂಡ ಬಿ.ಎಲ್.ದೇವರಾಜು ಹಾಗೂ ಬಣ ನಿರ್ಧರಿಸಿದ್ದು.
ನಾರಾಯಣಗೌಡ ಕಾಂಗ್ರೆಸ್ ಸೇರಿದ್ರೆ ಕಮಲ ಹಿಡಿಯಲು ದೇವರಾಜು & ಗುಂಪು ಪ್ಲಾನ್ ಮಾಡಿದ್ದು ಅವರು ಬಿಜೆಪಿಯಲ್ಲೇ ಉಳಿದರೆ ಕಾಂಗ್ರೆಸ್ ಸೇರಿ ಟಿಕೆಟ್ ಕೇಳುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನಾರಾಯಣಗೌಡ ನಡೆ ಕೆಆರ್ಪೇಟೆ ಕ್ಷೇತ್ರದ ರಾಜಕೀಯ ಗೊಂದಲಕ್ಕೆ ಕಾರಣವಾಗಿದ್ದು ಚುನಾವಣೆ ದಿನಾಂಕ ಘೋಷಣೆವರೆಗೂ ಇದೇ ನಡೆ ಅನುಸರಿಸುತ್ತಾರಾ ಎಂಬ ಅನುಮಾನ ಶುರುವಾಗಿದೆ.