

ಮೇಲ್ನೋಟಕ್ಕೆ ಭಯೋತ್ಪಾದಕರೆಲ್ಲ ಒಂದೇ ಎಂದು ನಮಗೆ ಕಂಡರೂ ಅವರಲ್ಲಿಯೂ ಅಧಿಕಾರ ದಾಹ, ಹಣದ ವ್ಯಾಮೋಹ, ಹೆಣ್ಣಿನ ಗೀಳು ಕಡಿಮೆಯೇನಿಲ್ಲ. ಕೆಲವೊಮ್ಮೆ ಈ ಚಟಗಳ ಕಾರಣಕ್ಕೆ ಅವರು ತಮಗೆ ಅರಿವಿಲ್ಲದಂತೆ ಭಯೋತ್ಪಾದನೆಯ ತೆಕ್ಕೆಗೆ ಬಿದ್ದುಬಿಡುತ್ತಾರೆ. ನಾಯ್ಕೂ ಇಂತಹುದ್ದೇ ಆಮಿಷಗಳನ್ನೊಡ್ಡಿ ಹೊಸಬರನೇಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ.
ಕರೊನಾದತ್ತ ಗಮನ ಹರಿಸಿದ ಮೇಲೆ ಕಾಶ್ಮೀರವನ್ನು ನಾವು ಮರೆತೇಬಿಟ್ಟಿದ್ದೇವೆ. ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಶಾಂತವಾಗಿದ್ದ ಕಾಶ್ಮೀರ ಈಗ ಮತ್ತೂ ಕರಾಳಶಾಂತಿಯತ್ತ ಹೊರಳುತ್ತಿದೆ. ಈಗಿನ ಈ ಕರಾಳಶಾಂತಿ ಪಾಕಿಸ್ತಾನದ, ಚೀನಿಯನ್ನರ ಮತ್ತು ಜಗತ್ತಿನ ಅನೇಕ ಉದಾರವಾದಿಗಳ ನೆಮ್ಮದಿಯನ್ನಂತೂ ಹಾಳುಗೆಡವುತ್ತಿದೆ. ಒಂದಷ್ಟು ವಿಸ್ತಾರವಾಗಿ ಇದನ್ನು ಒರೆಗೆ ಹಚ್ಚೋಣ.
ಕಾಶ್ಮೀರದಿಂದ ಆರ್ಟಿಕಲ್ 370 ಕಿತ್ತರೆ ದೇಶದಲ್ಲೆಲ್ಲ ಮುಸಲ್ಮಾನರು ದಂಗೆ ಏಳುತ್ತಾರೆ ಎಂದು ಸ್ವಾತಂತ್ರ್ಯದ ಲಾಗಾಯ್ತು ನಂಬಿಸಿಕೊಂಡು ಬಂದಿದ್ದೆವು. ಅಮಿತ್ ಷಾ ಬಲು ಚಾಕಚಕ್ಯತೆಯಿಂದ ಇದರ ವಿರೋಧಕ್ಕೆ ಬೇಕಾಗುವ ತಯಾರಿಯನ್ನು ದೇಶದ ಮುಸಲ್ಮಾನರು, ಪಾಕಿಸ್ತಾನದ ಐಎಸ್ಐ ಮಾಡಿಕೊಳ್ಳುವ ಮೊದಲೇ ಸಂವಿಧಾನದ ತಿದ್ದುಪಡಿಯನ್ನೇ ಮಾಡಿಬಿಟ್ಟಿದ್ದರು. ಈ ವಿಧಿಯನ್ನು ತೆಗೆದಿದ್ದಕ್ಕೆ ಪ್ರತಿಕ್ರಿಯೆ ಹೇಗೆ ಕೊಡಬೇಕೆಂದು ಯೋಜನೆ ರೂಪಿಸುತ್ತಿರುವಾಗಲೇ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂತು. ಆರ್ಟಿಕಲ್ 370 ಮತ್ತು ಸಿಎಎ ನಡುವಣ ಅವಧಿಯಲ್ಲಿ ಐಎಸ್ಐ ಭಾರತದಲ್ಲಿ ಇರುವ ತಮ್ಮ ಏಜೆಂಟುಗಳನ್ನು ತಿವಿದಿದ್ದರ ಪರಿಣಾಮವಾಗಿ ಅಂತೂ ಸಿಎಎ ವಿರುದ್ಧ ವ್ಯಾಪಕ ಪ್ರತಿಭಟನೆ ಆಯ್ತು. ಅದು ದೇಶವನ್ನು ಅಲುಗಾಡಿಸಿಬಿಡಲಿದೆ ಎಂಬ ಭ್ರಮೆಯಲ್ಲಿದ್ದ ಪಾಕಿಸ್ತಾನಿಗಳಿಗೆ ಬಲುದೊಡ್ಡ ನಷ್ಟವೇ ಆಯ್ತು. ಏಕೆಂದರೆ ಶಾಹಿನ್ಬಾಗ್ನಲ್ಲಿ ಪ್ರತಿಭಟನೆಗೆ ಕುಳಿತವರಿಂದ ಹಿಡಿದು ಮಂಗಳೂರಿನಲ್ಲಿ ಗುಂಡೇಟು ತಿಂದು ಸತ್ತವರವರೆಗೆ ಯಾರ ಕುರಿತಂತೆಯೂ ಜಾಗತಿಕ ಮಟ್ಟದಲ್ಲಾಗಲಿ, ದೇಶೀಯ ನೆಲೆಕಟ್ಟಿನಲ್ಲಾಗಲಿ ಅನುಕಂಪದ ಅಲೆ ವ್ಯಕ್ತವಾಗಲೇ ಇಲ್ಲ. ಇದು ಪ್ರತ್ಯೇಕ ಕಾಶ್ಮೀರದ ಭಾವನೆಗೆ ನಿಜಕ್ಕೂ ದೊಡ್ಡ ಹೊಡೆತವೇ ಆಗಿತ್ತು. ಕಾಶ್ಮೀರದಲ್ಲಿ ದಂಗೆಗಳೇ ನಡೆಯದಂತೆ ಸೈನಿಕರು ನೋಡಿಕೊಂಡಿರುವುದನ್ನು ಐಎಸ್ಐಗೆ ದುಡ್ಡು ಕೊಡುತ್ತಿದ್ದವರು ಸಹಜವಾಗಿ ಪ್ರಶ್ನಿಸಲಾರಂಭಿಸಿದರು. ಆಗ ಅವರಿಗೆ ವರದಾನವಾಗಿ ಬಂದಿದ್ದು ಕರೊನಾ!
ರಾಕ್ಷಸರೆಂದರೆ ಹಾಗೇ ಇರುತ್ತಾರೆ. ಇತರರು ನೋವಿನಲ್ಲಿ ಇರುವಾಗಲೂ ಅವರ ಮೇಲೆ ದಾಳಿ ಮಾಡಿ ವಿಕೃತ ಆನಂದವನ್ನು ಅನುಭವಿಸುತ್ತಾರೆ. ಇವರೂ ಹಾಗೆಯೇ. ಕರೊನಾ ವಿರುದ್ಧ ಭಾರತ ತಾನು ಹೋರಾಟ ಮಾಡುತ್ತಿರುವುದಲ್ಲದೆ ಸಂಕಟದಲ್ಲಿ ಇರುವ ಇತರ ರಾಷ್ಟ್ರಗಳಿಗೂ ಸಹಾಯಹಸ್ತವನ್ನು ಚಾಚಲು ಸಿದ್ಧವಾಗಿ ನಿಂತಿದ್ದಾಗಲೇ ಕಾಶ್ಮೀರದೊಳಕ್ಕೆ ಭಯೋತ್ಪಾದಕರನ್ನು ನುಸುಳಿಸುವ ಪಾಕಿಸ್ತಾನದ ಕೃತ್ಯ ಬೆಳಕಿಗೆ ಬಂತು. ಹಾಗಂತ ಸೇನೆ ತಯಾರಾಗಿರಲಿಲ್ಲ ಎಂದೇನಲ್ಲ. ಈ ಹೊಸವರ್ಷ ಆರಂಭ ವಾಗುತ್ತಿದ್ದಂತೆಯೇ ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ಹುಡುಹುಡುಕಿ ಕೊಲ್ಲಲು ಆರಂಭಮಾಡಿಬಿಟ್ಟಿದ್ದರು. ಹೀಗೆ ಸತ್ತ ಭಯೋತ್ಪಾದಕರ ಕುರಿತಂತೆ ಪಾಕಿಸ್ತಾನಕ್ಕೆ ಜವಾಬ್ದಾರಿಯೇನೂ ಇಲ್ಲ. ಇನ್ನೊಂದಷ್ಟು ಜನರ ತಲೆಕೆಡಿಸಿ ಒಳನುಸುಳಿಸಿದರಾಯ್ತು. ಹಾಗೆಂದುಕೊಂಡೇ ಪಾಕಿಸ್ತಾನ ದುಡ್ಡಿನ ಆಮಿಷ ತೋರಿಸಿ, ಮತದ ಅಫೀಮು ತಿನ್ನಿಸಿ ಒಂದಷ್ಟು ಜನರನ್ನು ನುಗ್ಗಿಸಿಬಿಡುತ್ತದೆ. ಭಯೋತ್ಪಾದಕರು ಗೆದ್ದರೆ ಪಾಕಿಸ್ತಾನಕ್ಕೆ ಲಾಭ, ಸತ್ತರೆ ನಷ್ಟವೇನೂ ಇಲ್ಲ.
ಈ ಬಾರಿ ಭಾರತೀಯ ಸೇನೆ ಒಳಗೆ ಬರಲೆತ್ನಿಸಿದ ಉಗ್ರರನ್ನು ಮುಗಿಸಲೇಬೇಕೆಂದು ಪಾಕ್ ಆಕ್ರಮಿತ ಕಾಶ್ಮೀರದ ಗಡಿಗಳ ಮೇಲೆ ಗಮನವಿಟ್ಟೇ ಕುಳಿತಿತ್ತು. ನೆನಪಿಡಿ, ಗಡಿರೇಖೆಯಲ್ಲಿ ಯಾವಾಗ ಪಾಕಿಸ್ತಾನ ಅಪ್ರಚೋದಿತ ದಾಳಿ ಮಾಡುತ್ತದೆಯೋ ಆಗ ಅದು ಭಾರತೀಯ ಸೈನಿಕರ ಗಮನವನ್ನು ನುಸುಳುಕೋರರಿಂದ ಪಕ್ಕಕ್ಕೆ ತಿರುಗಿಸುವ ಪ್ರಯತ್ನವೇ ಆಗಿರುತ್ತದೆ! ಈ ಬಾರಿ ಕರೊನಾ ಬಂದಾಗ ಈ ರೀತಿಯ ಅಪ್ರಚೋದಿತ ದಾಳಿ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಆಗಿತ್ತು. ಅದು ಪಾಕಿಸ್ತಾನಕ್ಕೆ ಹೆಮ್ಮೆಯ ಸಂಗತಿ ಕೂಡ. ಹೀಗೆ ಒಳ ಬರುವವರನ್ನು ಗಡಿಯಲ್ಲೇ ತಡೆಗಟ್ಟಿ ಕೊಂದರೆ ಒಂದು ಹಂತದ ಲಾಭ. ಅವರೇನಾದರೂ ಒಳಬಂದುಬಿಟ್ಟರೆ ಅವರನ್ನು ಹುಡುಕಿ ಕೊಲ್ಲುವುದು ಸುಲಭದ ಸಂಗತಿಯಲ್ಲ. ಇದೇ ರೀತಿ ಅಡಗಿದ್ದ ಭಯೋತ್ಪಾದಕರನ್ನು ಹುಡುಕಿ ಕೊಲ್ಲುವಾಗಲೇ ಕಾಶ್ಮೀರದ ಹಂದ್ವಾರಾದಲ್ಲಿ ನಾಲ್ಕು ಜನ ಸೈನಿಕರನ್ನು, ಒಬ್ಬ ಪೊಲೀಸರನ್ನು ಭಾರತ ಕಳೆದುಕೊಂಡಿದ್ದು! ಅದು ಭಯೋತ್ಪಾದಕರಿಗೆ ವಿಜಯೋತ್ಸವದ ದಿನ. ಅವರು ಗೆದ್ದೆವೆಂದು ಬೀಗುವಷ್ಟರಲ್ಲಿ ಭಾರತೀಯ ಸೇನೆ ರಿಯಾಜ್ ನಾಯ್ಕೂ ಎಂಬ ಹಿಜ್ಬುಲ್ ಮುಜಾಹಿದ್ದೀನ್ನ ಕಮಾಂಡರ್ನನ್ನು ಕೊಂದುಹಾಕಿತು.
ಇದನ್ನೂ ಓದಿ: ವಾಸನೆಯಿಂದಲೂ ಕಂಡುಹಿಡಿಯಬಹುದು ಕರೊನಾ: ಅದು ಹೇಗೆ?
ರಿಯಾಜ್ ನಾಯ್ಕೂವಿನ ಸಾವು ಪಾಕಿಸ್ತಾನದ ಭಯೋತ್ಪಾದಕ ಪ್ರಮುಖರಿಗೆ ಎಷ್ಟು ದೊಡ್ಡ ಹೊಡೆತ ಎನ್ನುವುದು ಅನೇಕರಿಗೆ ಅರ್ಥವಾಗಿರಲಿಕ್ಕಿಲ್ಲ. ಈತ ಕಾಶ್ಮೀರಿ ಭಯೋತ್ಪಾದಕರ ಇತಿಹಾಸದಲ್ಲೇ 8 ವರ್ಷಗಳಷ್ಟು ದೀರ್ಘಕಾಲ ಕ್ರಿಯಾಶೀಲವಾಗಿದ್ದವನು. ಬುಹ್ರಾನ್ ವಾನಿ ಹತನಾದ ನಂತರವೂ, ಹಿಜ್ಬುಲ್ ಒಡೆದು ಹೋಗುತ್ತದೆ ಎನ್ನುವ ಸಂದರ್ಭ ಬಂದಾಗಲೂ ಅದನ್ನು ಬಲವಾಗಿ ಹಿಡಿದು ನಿಲ್ಲಿಸಿದವನು ಆತ. ಆತನ ನಾಯಕತ್ವದ ಛವಿ ಹೇಗಿತ್ತೆಂದರೆ 2010ರಲ್ಲಿ 54 ಜನ ಸ್ಥಳೀಯರು ಭಯೋತ್ಪಾದಕರಾಗಲು ಮುಂದೆ ಬಂದು ಸಂಘಟನೆಗೆ ಸೇರಿಕೊಂಡರೆ ಅದಾದ ಮೂರು ವರ್ಷಗಳಲ್ಲಿ ಹೀಗೆ ಸೇರುವ ಸ್ಥಳೀಯರ ಪ್ರಮಾಣ ತೀರಾ ಕಡಿಮೆಯಾಯ್ತು. 2011-12ರಲ್ಲಿ 20ರ ಆಸುಪಾಸಿನಲ್ಲಿ ಸ್ಥಳೀಯರು ಸೇರ್ಪಡೆಗೊಂಡರೆ 2013ರಲ್ಲಿ ಹೀಗೆ ಸೇರಿಕೊಂಡವರ ಸಂಖ್ಯೆ 6 ಮಾತ್ರ. 2016ರಲ್ಲಿ ಬುಹ್ರಾನ್ ವಾನಿ ಹತನಾಗಿ, ನಾಯ್ಕೂ ಅಧಿಕಾರ ಪಡೆದಾಗ 126 ಜನ ಸೇರಿಕೊಂಡಿದ್ದರು. ಅದನ್ನೇ ಹೆಚ್ಚೆಂದು ಎಲ್ಲರೂ ಭಾವಿಸುತ್ತಿದ್ದರೆ, ಮರುವರ್ಷವೇ ಈತ ತನ್ನ ಪ್ರಭಾವ ಬಳಸಿ 200ಕ್ಕೂ ಹೆಚ್ಚು ತರುಣರ ತಲೆಕೆಡಿಸಿ ಭಯೋತ್ಪಾದಕರನ್ನಾಗಿಸಿದ್ದ! 12ಕ್ಕೂ ಹೆಚ್ಚು ಗುಪ್ತಸ್ಥಳಗಳನ್ನು ಹೊಂದಿದ್ದ ಈತ ಹತ್ತಾರು ಬಾರಿಯಾದರೂ ಸೈನಿಕರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿ ಆಗಿಬಿಟ್ಟಿದ್ದ. ಪಾಕಿಸ್ತಾನದಲ್ಲಿರುವ ಲಷ್ಕರ್-ಎ-ತೊಯ್ಬಾದ ಮುಖ್ಯಸ್ಥ ಸೈಯ್ಯೀದ್ ಸಲಾಹುದ್ದೀನ್ನ ಆತ್ಮೀಯರ ಪಟ್ಟಿಯಲ್ಲಿದ್ದ ಈತ ಎಷ್ಟು ಪ್ರಭಾವಿಯಾಗಿದ್ದನೆಂದರೆ ಈತ ದಾಳಿಯಲ್ಲಿ ಹತನಾದೊಡನೆ ಆ ದುಃಖವನ್ನು ಭರಿಸಲಾಗದೆ ಸಲಾಹುದ್ದೀನ್ ಒಂದು ಶೋಕಸಭೆಯನ್ನೇ ಕರೆದು ಅದರೊಳಗೆ ತನ್ನ ಹೃದಯಕ್ಕೆ ಆರದ ಗಾಯವಾಗಿದೆ ಎಂದೆಲ್ಲ ಅಲವತ್ತುಕೊಂಡ.
ನಾಯ್ಕೂ ಹುಟ್ಟಿದ್ದು ಪುಲ್ವಾಮಾದ ಅವಂತಿಪುರ ತಾಲೂಕಿನ ಬೇಗ್ಪುರದಲ್ಲಿ. ತಂದೆ ಅಸಾದುಲ್ಲ ಹೊಲಿಗೆಯಂತ್ರವನ್ನಿಟ್ಟುಕೊಂಡಿದ್ದವರು. ಶಿಕ್ಷಣ ಮುಗಿಸಿದ ನಂತರ ಗಣಿತದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ನಾಯ್ಕೂ. 2010 ರಿಂದ 12ರ ನಡುವೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದು ಅವರ ಹಿತೈಷಿಯಾಗಿ ಅವರಿಗೆ ಸ್ಥಳೀಯ ಸಹಕಾರಗಳನ್ನು ಒದಗಿಸಲಾರಂಭಿಸಿದ. 2012ರ ಮೇ ತಿಂಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್ಗೆ ಅಧಿಕೃತವಾಗಿ ಸೇರಿಕೊಂಡ. ಮುಂದಿನ ಐದು ವರ್ಷಗಳಲ್ಲಿ ಸಂಘಟನೆಯನ್ನು ಬಲಪಡಿಸುವಲ್ಲಿ ತನ್ನನ್ನು ತೊಡಗಿಸಿಕೊಂಡ. ಬುಹ್ರಾನ್ ವಾನಿಗೂ ನಾಯ್ಕೂಗೂ ಚಟುವಟಿಕೆಯ ಶೈಲಿಯಲ್ಲಿ ಒಂದು ಭಿನ್ನತೆಯಿತ್ತು. ಆತ ಫೇಸ್ಬುಕ್ನಲ್ಲಿ, ಟ್ವಿಟರ್ನಲ್ಲಿ ತನ್ನ ಚಿತ್ರಗಳನ್ನು ಹಾಕಿಕೊಂಡು ತರುಣರನ್ನು ಆಕರ್ಷಿಸುತ್ತ ಸಂಘಟನೆಯನ್ನು ವಿಸ್ತಾರಗೊಳಿಸುವ ವಿಚಾರದಲ್ಲಿ ನಂಬಿಕೆ ಇಟ್ಟಿದ್ದರೆ, ನಾಯ್ಕೂ ಪ್ರತಿಯೊಬ್ಬರ ಜೊತೆ ಸಂಪರ್ಕ ಬಲಪಡಿಸಿಕೊಳ್ಳುವ ಮೂಲಕ ಮತ್ತು ಶತ್ರುಗಳಲ್ಲಿ ಹೆದರಿಕೆ ಹುಟ್ಟಿಸುವ ಕ್ರಿಯೆಗಳಿಗೆ ಪ್ರೇರೇಪಣೆ ಕೊಡುವ ಮೂಲಕ ತರುಣರನ್ನು ತನ್ನವರನ್ನಾಗಿಸಿಕೊಳ್ಳುತ್ತಿದ್ದ. ಬುಹ್ರಾನ್ ವಾನಿಯೊಂದಿಗೆ ಯಾವ ಫೋಟೋದಲ್ಲೂ ಈತ ಕಾಣಿಸಿಕೊಂಡವನೇ ಅಲ್ಲ. ಈತ ಓದಿಕೊಂಡವನೆಂಬ ಗೌರವ ಇದ್ದುದರಿಂದ ಜೊತೆಗಾರರೆಲ್ಲ ಇವನ ಬಗ್ಗೆ ವಿಶೇಷವಾದ ಅಭಿಮಾನ ಹೊಂದಿದ್ದರು. ಅದೂ ಕೂಡ ಸಂಘಟನೆಯಲ್ಲಿ ವೇಗವಾಗಿ ಬೆಳೆಯಲು ಇವನಿಗೆ ಅನುವು ಮಾಡಿಕೊಟ್ಟಿತು. 2016ರಲ್ಲಿ ಬುಹ್ರಾನ್ ವಾನಿ ಪೊಲೀಸ್ ಎನ್ಕೌಂಟರ್ನಲ್ಲಿ ಹತನಾದ ಬಳಿಕ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಅಲುಗಾಡುವಂತೆ ಕಾಣುತ್ತಿತ್ತು. ಬುಹ್ರಾನ್ ವಾನಿಯ ನಂತರ ಅಧಿಕಾರ ಸ್ವೀಕರಿಸಿದ ಜಾಕಿರ್ ಮೂಸಾ ಸಂಘಟನೆಯ ನಿಷ್ಠೆಯನ್ನು ಪಾಕಿಸ್ತಾನಕ್ಕಿಡಬೇಕೋ ಅಥವಾ ವೈಶ್ವಿಕ ಮಟ್ಟದ್ದಾಗಿರಬೇಕೋ ಎಂಬ ವಿಚಾರದಲ್ಲಿ ಹಿಜ್ಬುಲ್ನಿಂದ ಹೊರಬಂದ. ತನ್ನದ್ದೇ ಆದ ಅನ್ಸರ್-ಉಲ್ ಗಜ್ವಾತ್-ಉಲ್-ಹಿಂದ್ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಆ ಮೂಲಕ ಚಟುವಟಿಕೆ ನಡೆಸಲಾರಂಭಿಸಿದ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಂಘಟನೆಯನ್ನು ಕೈಗೆತ್ತಿಕೊಂಡವ ನಾಯ್ಕೂ. ತನ್ನ ನಿಷ್ಠೆಯನ್ನು ಪಾಕಿಸ್ತಾನಕ್ಕೆ ಬಲವಾಗಿರಿಸಿ ಜೊತೆಗಾರರು ಈ ದಿಸೆಯಲ್ಲಿ ಹಾದಿ ತಪ್ಪದಂತೆ ನೋಡಿಕೊಂಡ ಆತ ಜಾಕಿರ್ ಮೂಸಾನ ಸಂಘಟನೆ ಬೆಳೆಯದಂತೆ ನೋಡಿಕೊಂಡ! ಮೇಲ್ನೋಟಕ್ಕೆ ಭಯೋತ್ಪಾದಕರೆಲ್ಲ ಒಂದೇ ಎಂದು ನಮಗೆ ಕಂಡರೂ ಅವರಲ್ಲಿಯೂ ಅಧಿಕಾರ ದಾಹ, ಹಣದ ವ್ಯಾಮೋಹ, ಹೆಣ್ಣಿನ ಗೀಳು ಕಡಿಮೆಯೇನಿಲ್ಲ.
ಇದನ್ನೂ ಓದಿ: ನಮ್ಮನ್ನು ನಮ್ಮೂರಿಗೆ ಕಳುಹಿಸಿ ಕೊಡಿ; ಕಾರ್ಮಿಕರ ಅಳಲು
ಕೆಲವೊಮ್ಮೆ ಈ ಚಟಗಳ ಕಾರಣಕ್ಕೆ ಅವರು ತಮಗೆ ಅರಿವಿಲ್ಲದಂತೆ ಭಯೋತ್ಪಾದನೆಯ ತೆಕ್ಕೆಗೆ ಬಿದ್ದುಬಿಡುತ್ತಾರೆ. ನಾಯ್ಕೂ ಇಂತಹುದ್ದೇ ಆಮಿಷಗಳನ್ನೊಡ್ಡಿ ಹೊಸಬರನೇಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ. ಜಾಕಿರ್ ಮೂಸಾ ಸೈನಿಕರ ಎನ್ಕೌಂಟರ್ನಲ್ಲಿ ಹತನಾದ ಮೇಲೆ ನಾಯ್ಕೂ ಕಾಶ್ಮೀರಕೊಳ್ಳದ ಅನಭಿಷಕ್ತ ದೊರೆಯಾಗಿಬಿಟ್ಟ. ಒಂದಷ್ಟು ಭಯಾನಕವಾದ ಕಾರ್ಯಾಚರಣೆಗಳ್ನು ನಡೆಸಿದ. ಪೊಲೀಸರನ್ನು ಕೊಂದುಹಾಕಿದ. ಒಮ್ಮೆಯಂತೂ ಈತನ ಸುಳಿವು ಕೊಡುವಂತೆ ಪೊಲೀಸರು ಅವನ ತಂದೆಯನ್ನು ಬಂಧಿಸಿದಾಗ ನಾಯ್ಕೂ ಒಂದಷ್ಟು ಪೊಲೀಸರನ್ನೇ ಅಪಹರಿಸಿಕೊಂಡು ಹೋಗಿ ತಂದೆಯ ಬಿಡುಗಡೆಗಾಗಿ ಒತ್ತಾಯಿಸಿದ. ಇವೆಲ್ಲವನ್ನೂ ಭಾರತೀಯ ಸೇನೆ ಗಮನಿಸುತ್ತಲೇ ಇತ್ತು. ತಮ್ಮೊಂದಿಗೆ ಸೇರಿಕೊಳ್ಳದ ತರುಣರನ್ನು ‘ಮಾಹಿತಿಗಾರರು’ ಎಂಬ ಆರೋಪ ಮಾಡಿ ಹತ್ಯೆ ಮಾಡುವ ಪೃಥೆಯನ್ನು ತಂದವನೇ ನಾಯ್ಕೂ.ಸ್ಥಳೀಯ ರೈತರನ್ನೂ, ಸಿರಿವಂತರನ್ನೂ ಸಂಘಟನೆಗೆ ಹಣದ ನೆಪದಲ್ಲಿ ಲೂಟಿ ಮಾಡಲಾರಂಭಿಸಿದವನೂ ಈತನೇ. ಈತನನ್ನು ಹಿಡಿಯಬೇಕೆಂದು ಸೈನ್ಯ ಸಾಕಷ್ಟು ಪರಿಶ್ರಮ ಹಾಕಿತು. ಇವನ ತಲೆಗೆ 12 ಲಕ್ಷ ಬಹುಮಾನವನ್ನೂ ಕೊಟ್ಟಿತ್ತು.
ಮೊನ್ನೆ ಈತನ ಅಡಗುತಾಣದ ನಿಖರ ಸುದ್ದಿಯನ್ನು ಪಡೆದುಕೊಂಡ ಸೈನಿಕರು ಅತ್ತ ಹೊರಟೇಬಿಟ್ಟರು. ನಾಲ್ಕು ಅಧಿಕಾರಿಗಳನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಸೈನಿಕರಿಗೆ ದೊಡ್ಡದೊಂದು ಗೆಲುವು ಈಗ ಬೇಕೇಬೇಕಾಗಿತ್ತು. ಸೈನ್ಯ, ಸಿಆರ್ಪಿಎಫ್ ಮತ್ತು ಪೊಲೀಸರು ಜೊತೆಗೂಡಿ ನಾಯ್ಕೂ ಅಡಗಿದ್ದ ಮನೆಯನ್ನು ಸುತ್ತುವರಿದರು. 15 ದಿನಗಳಿಂದ ಆತನನ್ನು ಹಿಂಬಾಲಿಸುವ ಪ್ರಕ್ರಿಯೆ ನಡೆದಿದ್ದರಿಂದ ಆತ ತಪ್ಪಿಸಿಕೊಂಡು ಹೋಗಲು ಯಾವ ಅವಕಾಶವನ್ನೂ ನೀಡಬಾರದೆಂದು ನಿರ್ಧರಿಸಿಯಾಗಿತ್ತು. ಆದರೆ ಆತ ಅಡಗಿದ್ದಾನೆಂದು ಹೇಳಲಾಗುವ ಮನೆಯನ್ನು ಪೂರ್ತಿಯಾಗಿ ಪರಿಶೀಲಿಸಿದ ನಂತರವೂ ಆತ ಇರುವ ಸುಳಿವೇ ಸಿಗಲಿಲ್ಲ! ಸೈನ್ಯದ ಒಂದು ತುಕಡಿ ಮರಳಿಬಿಟ್ಟಿತು. ಆದರೆ ಪೂರ್ವ ನಿಯೋಜಿತ ಯೋಜನೆಯಂತೆ ಆ ಮನೆಯನ್ನು ಗಮನಿಸಲು ದೂರದಲ್ಲಿ ಪೊಲೀಸರನ್ನು ಹಾಗೆಯೇ ಇರಿಸಲಾಗಿತ್ತು. ಆ ಮನೆಯೊಳಗೆ ಅಡಗುತಾಣಗಳಿದ್ದು ನಾಯ್ಕೂ ಬಚ್ಚಿಟ್ಟುಕೊಂಡಿದ್ದಾನೆ ಎಂಬ ವಿಶ್ವಾಸ ಎಲ್ಲರಲ್ಲೂ ಇತ್ತು. ಮತ್ತು ಅವನಿಗೆ ಪ್ರತಿನಿತ್ಯ ಊಟ ಕೊಡುತ್ತಿದ್ದವನೇ ಸೈನಿಕರಿಗೆ ಈ ಮಾಹಿತಿ ಕೊಟ್ಟಿದ್ದುದರಿಂದ ಅದು ಸುಳ್ಳಾಗಲು ಸಾಧ್ಯವೇ ಇರಲಿಲ್ಲ. ಸ್ವಲ್ಪಹೊತ್ತಿಗೆ ಆತ ಇರುವ ಸುಳಿವು ಖಚಿತವಾಗುತ್ತಿದ್ದಂತೆ ಸೇನೆ ತೀವ್ರಪ್ರಮಾಣದಲ್ಲಿ ಮುತ್ತಿಗೆ ಹಾಕಿತು.
ನಾಯ್ಕೂ ಜೊತೆಯಲ್ಲಿದ್ದ ಮತ್ತೊಬ್ಬ ಭಯೋತ್ಪಾದಕ ಸೈನಿಕರೊಂದಿಗೆ ಕದನ ನಡೆಸುತ್ತಲೇ ಪ್ರಾಣಬಿಟ್ಟ. ಆದರೆ ಎಲ್ಲರೆದುರು ಜೋರು-ಜೋರಾಗಿ ಮಾತನಾಡುವ ನಾಯ್ಕೂ, ಕಾಶ್ಮೀರದ ಬಿಡುಗಡೆಗೆ ರಕ್ತವನ್ನಾದರೂ ಚೆಲ್ಲಬೇಕೆಂದು ಹೇಳುತ್ತ ತರುಣರ ತಲೆಕೆಡಿಸುತ್ತಿದ್ದ ನಾಯ್ಕೂ ಮೃತ್ಯು ಎದುರಿಗೆ ನಿಂತಾಗ ಮಾತ್ರ ಹೇಡಿಯಾಗಿಬಿಟ್ಟ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡುತ್ತಲೇ ಇದ್ದ. ಪೊಲೀಸರು ಸುತ್ತುವರಿದುಬಿಟ್ಟಿದ್ದಾರೆ ಎಂದು ಗೊತ್ತಾದಾಗ ಮೂರ್ನಾಲ್ಕು ಸುತ್ತಿನ ಗುಂಡು ಹಾರಿಸಿದ. ಇಷ್ಟಾಗುವ ವೇಳೆಗೆ ಆತನ ಗುರಿಯಲ್ಲೂ ನಿಖರತೆಯಿಲ್ಲ ಎಂದರಿತ ಸೈನಿಕರು ಮುನ್ನುಗ್ಗಿದರು. ಕೆಲವರು ಹೇಳುವ ಪ್ರಕಾರ ತನ್ನನ್ನು ಬಿಟ್ಟುಬಿಡಿರೆಂದು ಆತ ಸೈನಿಕರೆದುರು ಗೋಗರೆದಿದ್ದನಲ್ಲದೆ ‘ಪಾಕಿಸ್ತಾನಕ್ಕೆ ಮುರ್ದಾಬಾದ್’ ಎಂದೂ ಘೊಷಣೆ ಕೂಗಿದ್ದನಂತೆ! ಅದರ ಸತ್ಯಾಸತ್ಯತೆಯನ್ನು ಬದಿಗಿಟ್ಟು ನೋಡುವುದಾದರೂ ರಿಯಾಜ್ ಹಿಜ್ಬುಲ್ನ ನಾಯಕನಾಗಿ ಹೋರಾಟ ಮಾಡದೆ ಈ ಪರಿ ಸಾವಿಗೆ ಶರಣಾಗಿದ್ದು ಮಾತ್ರ ಭಯೋತ್ಪಾದಕರ ಹೇಡಿತನಕ್ಕೆ ಸ್ಪಷ್ಟ ಉದಾಹರಣೆ.
ದುರಂತವೆಂದರೆ ಆತ ಹತನಾದ ನಂತರ ಭಯೋತ್ಪಾದಕರ ಮುಖವಾಣಿ ಎನಿಸಿಕೊಂಡ ಕೆಲವು ಪತ್ರಿಕೆಗಳು ನಾಯ್ಕೂವನ್ನು ಹೊಗಳಿ, ಅಟ್ಟಕ್ಕೇರಿಸಿದವು. ಅದು ಆತನ ಶವಯಾತ್ರೆಗೆ ಹೆಚ್ಚು-ಹೆಚ್ಚು ತರುಣರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿತ್ತು. ಆ ಮೂಲಕ ಹೆಚ್ಚು ಭಯೋತ್ಪಾದಕರನ್ನು ಕಾಶ್ಮೀರದ ನೆಲದಲ್ಲಿ ಸೃಷ್ಟಿಸುವ ಹುನ್ನಾರವೂ ಕೂಡ. ಆದರೆ ಭಾರತೀಯ ಸೇನೆ ಕರೊನಾದ ನೆಪ ಹೇಳಿ ಶವವನ್ನು ಯಾರಿಗೂ ಕೊಡದೆ ಅಜ್ಞಾತಸ್ಥಳದಲ್ಲಿ ಅವನಿಗೆ ಸಂಸ್ಕಾರ ಮಾಡಿಬಿಟ್ಟಿತು. ಪಾಕಿಸ್ತಾನ ಈಗ ಚಡಪಡಿಸುತ್ತಿದೆ. ಅದಕ್ಕೀಗ ಕಾಶ್ಮೀರದಲ್ಲಿ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವವರಿಲ್ಲ. ಅತ್ತ ಪಾಕಿಸ್ತಾನದಲ್ಲೂ ಸಾಕಷ್ಟು ನಿಧಿ ಹುಟ್ಟುತ್ತಿಲ್ಲ. ಅಲ್ಲದೆ, ಹೇಗೆ ಕರೊನಾ ಸಂದರ್ಭದಲ್ಲಿ ಭಯೋತ್ಪಾದಕರ ಮೂಲಕ ನಮ್ಮ ನಿದ್ದೆಗೆಡಿಸಲು ಪಾಕಿಸ್ತಾನ ಪ್ರಯತ್ನಪಟ್ಟಿತೋ, ಹಾಗೇ ಪಿಒಕೆಯನ್ನು ಮರಳಿ ಪಡೆಯುವ ಮಾತುಗಳನ್ನಾಡುತ್ತ ಭಾರತ ಈ ಹೊತ್ತಿನಲ್ಲೇ ಪಾಕಿಸ್ತಾನವನ್ನು ಹೆದರಿಸುತ್ತಿದೆ. ಗಿಲ್ಗಿಟ್, ಬಾಲ್ಟಿಸ್ತಾನಗಳನ್ನು ತನ್ನದ್ದೇ ಅಂಗವೆಂದು ಹೇಳಿದೆಯಲ್ಲದೆ ಹವಾಮಾನ ವರದಿಯಲ್ಲೂ ಅವುಗಳನ್ನು ಉಲ್ಲೇಖಿಸುವ ಪ್ರಯತ್ನ ಮಾಡಿ ಪಾಕಿಸ್ತಾನದ ನಿದ್ದೆ ಹಾರುವಂತೆ ಮಾಡಿದೆ! ಇನ್ನೇನಿದ್ದರೂ ಅದನ್ನು ವಶಪಡಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ ಅಷ್ಟೇ. ಅಥವಾ ಪಿಒಕೆಯಲ್ಲಿ ಹೆದರಿಕೆ ಹುಟ್ಟಿಸಿ ಬಲೂಚಿಸ್ತಾನವನ್ನೇ ಪ್ರತ್ಯೇಕಗೊಳಿಸಿದರೂ ಇಲ್ಲವೆನ್ನಲಾಗುವುದಿಲ್ಲ. ಅದಾಗಲೇ ಅಜಿತ್ ಡೋವಲ್ ಇದಕ್ಕಾಗಿ ಬೇಕಾಗಿರುವ ತಯಾರಿಯನ್ನು ಆರಂಭಿಸಿಬಿಟ್ಟಿದ್ದಾರೆ ಎಂಬ ಸುದ್ದಿ ಬರುತ್ತಿದೆ. ನಾವು-ನೀವು ಕರೊನಾದೊಂದಿಗೆ ಹೋರಾಡುತ್ತಿರುವಾಗಲೇ ಭಾರತ ಮಹತ್ವದ ಕಾರ್ಯಾಚರಣೆಯೊಂದಕ್ಕೆ ಮುನ್ನುಡಿ ಬರೆಯುತ್ತಿದೆ. ಕಾದು ನೋಡೋಣ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)