ಶಾಂಘೈ ಸಹಕಾರ ಒಕ್ಕೂಟ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರ ವಾರ್ಷಿಕ ಸಭೆಗೆ ಇಮ್ರಾನ್​ಗೆ ಭಾರತ ಆಹ್ವಾನ?

Imran Khan 15 Jan 20
Published on

ನವದೆಹಲಿ: ಶಾಂಘೈ ಸಹಕಾರ ಒಕ್ಕೂಟ (ಎಸ್​ಸಿಒ) ಸದಸ್ಯ ರಾಷ್ಟ್ರಗಳ ಮುಖ್ಯಸ್ಥರ ವಾರ್ಷಿಕ ಸಭೆಗೆ ಈ ಬಾರಿ ಆತಿಥ್ಯ ವಹಿಸಲಿರುವ ಭಾರತ, ನೆರೆಯ ರಾಷ್ಟ್ರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ಗೂ ಆಹ್ವಾನ ನೀಡಲಿದೆ ಎಂದು ತಿಳಿದುಬಂದಿದೆ. ಎಸ್​ಸಿಒ ವಾರ್ಷಿಕ ಸಭೆಗೆ ಇನ್ನೂ ಸಾಕಷ್ಟು ಸಮಯವಿದ್ದು, ಇಮ್ರಾನ್ ಖಾನ್ ಭಾರತಕ್ಕೆ ಭೇಟಿ ನೀಡುತ್ತಾರೋ ಇಲ್ಲವೋ ಎಂಬ ಬಗ್ಗೆ ಇಸ್ಲಾಮಾಬಾದ್ ರಾಯಭಾರ ಕಚೇರಿಯಿಂದ ಅಂತಿಮ ನಿರ್ಧಾರ ಹೊರಬೀಳಲಿದೆ.

ಸರ್ಕಾರದ ಮೂಲಗಳ ಪ್ರಕಾರ, ಶಿಷ್ಟಾಚಾರದಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್​ಗೆ ಭಾರತ ಆಹ್ವಾನ ಆಮಂತ್ರಣ ಕಳುಹಿಸಲಿದೆ. ಅವರು ಭಾರತಕ್ಕೆ ಬರಬೇಕೋ ಬೇಡವೋ ಎಂಬ ಬಗ್ಗೆ ಪಾಕ್ ಅಂತಿಮ ನಿರ್ಧಾರ ಕೈಗೊಳ್ಳಬೇಕು. ನಿಯಮಗಳ ಪ್ರಕಾರ ಶಾಂಘೈ ಸದಸ್ಯ ರಾಷ್ಟ್ರಗಳ ವಿದೇಶಾಂಗ ಇಲಾಖೆ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಕೆಲ ದೇಶಗಳ ಪ್ರಧಾನಮಂತ್ರಿಗಳೂ ಕೂಡ ಸಭೆಗಳಲ್ಲಿ ಭಾಗವಹಿಸುತ್ತಾರೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ಸಿಆರ್​ಪಿಎಫ್ ವಾಹನದ ಮೇಲೆ ಉಗ್ರರ ಆತ್ಮಾಹುತಿ ದಾಳಿ ನಡೆದ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉಂಟಾಗಿದ್ದ ಬಿಕ್ಕಟ್ಟಿನಿಂದಾಗಿ ಉಭಯ ದೇಶಗಳ ನಡುವೆ ಮಾತುಕತೆ ಸ್ಥಗಿತವಾಗಿದೆ. ಈಗ ಇಮ್ರಾನ್ ಖಾನ್ ಭಾರತ ಭೇಟಿ ಕೈಗೊಳ್ಳುತ್ತಾರಾ ಎಂಬ ಬಗ್ಗೆ ಕುತೂಹಲ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net