

ನವದೆಹಲಿ: ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸಂಖ್ಯೆಯನ್ನು 5ಕ್ಕೆ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಬ್ಯಾಂಕಿಂಗ್ ಉದ್ಯಮವನ್ನು ಮರುವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳನ್ನು ವಿಲೀನಗೊಳಿಸುವ ಬದಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ತನ್ನ ಯೋಜನೆಯ ಮೊದಲ ಭಾಗವಾಗಿ ಸರ್ಕಾರ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯುಕೋ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಪಂಜಾಬ್ ಆ್ಯಂಡ್ ಸಿಂಗ್ ಬ್ಯಾಂಕ್ಗಳಲ್ಲಿನ ಬಂಡವಾಳ ಹಿಂತೆಗೆತಕ್ಕೆ ಮುಂದಾಗಲಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಸದ್ಯ 12 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಿವೆ. ಇವನ್ನು 5ಕ್ಕೆ ಇಳಿಸುವುದು ಸರ್ಕಾರದ ನಿರ್ಧಾರವಾಗಿದೆ. ಸರ್ಕಾರ ಯೋಜನೆಯ ರೂಪರೇಷೆಯನ್ನು ಸಿದ್ಧಪಡಿಸುತ್ತಿದೆ. ಅದು ಸಿದ್ಧವಾದ ಬಳಿಕ ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಮಂಡಿಸಲಿದೆ ಎನ್ನಲಾಗಿದೆ.
ಸರ್ಕಾರದ ವಿವಿಧ ಸಮಿತಿಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಐದಕ್ಕಿಂತ ಹೆಚ್ಚಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ಹೊಂದಿರಬಾರದು ಎಂದೇ ಸರ್ಕಾರಕ್ಕೆ ಸಲಹೆ ನೀಡುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ವಿಲೀನಗೊಳಿಸುವ ಬದಲು ಅವುಗಳಲ್ಲಿನ ಹೂಡಿಕೆಯನ್ನು ಹಿಂಪಡೆದು ಖಾಸಗೀಕರಣಗೊಳಿಸುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರ ಕಳೆದ ವರ್ಷ 10 ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ವಿಲೀನಗೊಳಿಸಿ ನಾಲ್ಕು ಬೃಹತ್ ಬ್ಯಾಂಕ್ಗಳನ್ನಾಗಿ ಪರಿವರ್ತಿಸಿತ್ತು. ಆದರೆ ಈ ಬಾರಿ ಬ್ಯಾಂಕ್ಗಳನ್ನು ವಿಲೀನಗೊಳಿಸುವ ಬದಲು ಅವುಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೆ, ದೇಶದಲ್ಲಿರುವ ಕೋವಿಡ್-19 ಪಿಡುಗಿನಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲೇ ಇದು ಸಾಧ್ಯವಾಗದು ಎಂಬ ಮಾತುಗಳು ಕೇಳಿಬರುತ್ತಿವೆ. ಕೋವಿಡ್ನಿಂದಾಗಿ ಬ್ಯಾಂಕ್ಗಳಲ್ಲಿ ಮರುಪಾವತಿಯಾಗದ ಸಾಲಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.