ರಜಿನಿ ರಾಜಕೀಯ ಪಕ್ಷದ ಭವಿಷ್ಯ - ಶೀಘ್ರವೇ ತೀರ್ಮಾನ ಪ್ರಕಟಿಸುವೆ ಎಂದ ಸೂಪರ್​ಸ್ಟಾರ್​

rajinikanth
Published on

ಚೆನ್ನೈ: ರಾಜಕೀಯ ರಂಗ ಪ್ರವೇಶಕ್ಕೆ ಸಂಬಂಧಿಸಿ ಮೌನವಾಗಿದ್ದ ರಜಿನೀಕಾಂತ್ ಸೋಮವಾರ ದಿಢೀರ್ ಪಕ್ಷದ ಸಭೆ ಕರೆದಿದ್ದು, ಗಂಭೀರ ಚರ್ಚೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೂಪರ್​ಸ್ಟಾರ್​, ತಮ್ಮ ರಾಜಕೀಯ ಪಕ್ಷ ರಜಿನಿ ಮಕ್ಕಳ್ ಮಂದ್ರಂ ನ ಭವಿಷ್ಯದ ಕುರಿತಾದ ತೀರ್ಮಾನವನ್ನು ಶೀಘ್ರವೇ ಪ್ರಕಟಿಸುವೆ ಎಂದು ಘೋಷಿಸಿದ್ದಾರೆ.

ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯದರ್ಶಿಗಳ ಜತೆಗೆ ಮಾತುಕತೆ ನಡೆಸಿದ ನಂತರದಲ್ಲಿ ಪೊಯೆಸ್ ಗಾರ್ಡನ್​ನಲ್ಲಿರುವ ತಮ್ಮ ನಿವಾಸದ ಸಮೀಪ ಸುದ್ದಿಗಾರರ ಜತೆಗೆ ಮಾತನಾಡುತ್ತ ಈ ವಿಚಾರ ತಿಳಿಸಿದರು. ಪಕ್ಷದ ಪದಾಧಿಕಾರಿಗಳ ಜತೆಗಿನ ಮಾತುಕತೆ ಫಲಪ್ರದವಾಗಿದೆ. ನಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಅವರೆಲ್ಲ ಬದ್ಧರಾಗಿರುವುದಾಗಿ ಭರವಸೆ ನೀಡಿದ್ದಾರೆ. ಅವರೆಲ್ಲರ ಚಿಂತನೆಗಳನ್ನು ಗಮನಿಸಿ ಶೀಘ್ರವೇ ಒಂದು ನಿರ್ಣಯ ತೆಗೆದುಕೊಳ್ಳುವುದಾಗಿ ರಜಿನಿಕಾಂತ್ ತಿಳಿಸಿದರು.

ತಮಿಳುನಾಡಿನಲ್ಲಿ 2021ರ ಏಪ್ರಿಲ್​-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಕಳೆದ ತಿಂಗಳಷ್ಟೇ ರಜಿನಿಕಾಂತ್ ತಾವು 2016ರಲ್ಲಿ ಕಿಡ್ನಿ ಕಸಿ ಮಾಡಿಸಿದ ವಿಚಾರ ಬಹಿರಂಗಪಡಿಸಿದ್ದರು. ವೈದ್ಯರ ಸಲಹೆ ಮೇರೆಗೆ ರಾಜಕೀಯ ಚಟುವಟಿಕೆ ವಿಳಂಬ ಮಾಡಿದ್ದಾಗಿ ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net