

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಮನೆ ಊಟ, ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಇಂದು (ಆಗಸ್ಟ್ 20) ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಲಿದೆ.
ಕಳೆದ ಬಾರಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿತ್ತು. ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಇಂದು (ಆಗಸ್ಟ್20) ಹೈಕೋರ್ಟ್ ಏಕ ಸದಸ್ಯ ಪೀಠ ತನ್ನ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ.
ಸುದ್ದಿ ಮೂಲಗಳು ಹೇಳುವ ಪ್ರಕಾರ ಜೈಲಿನ ಅಧಿಕಾರಿಗಳು ನಟ ದರ್ಶನ್ಗೆ ಮನೆಯೂಟ ಹಾಗೂ ಹಾಸಿಗೆಯ ಅವಶ್ಯಕತೆವಿಲ್ಲವೆಂದು ವರದಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ವೈದ್ಯಾಧಿಕಾರಿಗಳು ಸಹ ನ್ಯಾಯಾಲಯದ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಂತಿಮವಾಗಿ ನ್ಯಾಯಾಲಯ ಕೈಗೊಳ್ಳುವ ನಿರ್ಣಯದ ಮೇಲೆ ದರ್ಶನ್ ಸಲ್ಲಿಸಿರುವ ಅರ್ಜಿ ಇತ್ಯರ್ಥಗೊಳ್ಳುತ್ತದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್ಗೆ ನ್ಯಾಯಾಲಯ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 200ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಶೇ. 70ರಷ್ಟು ಸಾಕ್ಷ್ಯಗಳ ಎಫ್ಎಸ್ಎಲ್ ವರದಿಗಳು ಪೊಲೀಸರ ಕೈ ಸೇರಿವೆ. ಇನ್ನುಳಿದ ಸಾಕ್ಷ್ಯಗಳ ಎಫ್ಎಸ್ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಹೈದರಾಬಾದ್ಗೆ ಕಳಿಸಲಾಗಿರುವ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಉಪಕರಣಗಳು, ಸಿಸಿ ಕ್ಯಾಮೆರಾ, ಆಡಿಯೋ ಸ್ಯಾಂಪಲ್ಸ್, ಮೊಬೈಲ್ ಡೇಟಾ ರಿಪೋರ್ಟ್ ಎಫ್ಎಸ್ಎಲ್ ವರದಿಗಳು ಮಾತ್ರವೇ ಬರಬೇಕಿದೆ. ಇನ್ನು 30% ವರದಿಗಳು ಮಾತ್ರವೇ ಬರಬೇಕಿದ್ದು, ಈ ವರದಿಗಳು ಪೊಲೀಸರ ಕೈ ಸೇರಿದ ನಂತರ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ.