VIDEO| ಟ್ರಾಫಿಕ್​ ಫೈನ್​ ವಿಧಿಸಿದ್ದಕ್ಕೆ ಸಿಟ್ಟು; ಪೊಲೀಸರೆದುರೇ ಆಟೋಗೆ ಬೆಂಕಿ ಹಚ್ಚಿದ ಮಾಲೀಕ

Tempo Fire
Published on

ಲಖನೌ: ಟ್ರಾಫಿಕ್​ ಪೊಲೀಸರು ದಂಡ ವಿಧಿಸಿದ್ದಕ್ಕೆ ಕುಪಿತಗೊಂಡು ವ್ಯಕ್ತಿಯೋರ್ವ ತನ್ನ ಲಗ್ಗೇಜ್​ ಆಟೋಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಉತ್ತರಪ್ರದೇಶದ ಬುಲಂದರ್​ಶಹರ್​ನಲ್ಲಿ ನಡೆದಿದೆ.

ಸುದ್ದಿ ಮೂಲಗಳ ಪ್ರಕಾರ ಈ ವರ್ಷ ಮಾರ್ಚ್​ನಲ್ಲಿ ವ್ಯಕ್ತಿ ಲಗ್ಗೇಜ್​ ಆಟೋ ಖರೀದಿಸಿದ್ದರಂತೆ. ಆದರೆ, ಸಂಚಾರಿ ಪೊಲೀಸರು ವಿಧಿಸಿದ ದಂಡದಿಂದ ಸಿಟ್ಟಿಗೆದ್ದು ಆಟೋಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ರಕ್ಷಾಬಂಧನ ಪ್ರಯುಕ್ತ ನಗರದ ವಿವಿಧೆಡೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಈ ವೇಳೆ ಪಹಸು-ಖುರ್ಜಾ ರಸ್ತೆಯಲ್ಲಿ ಆಟೋ ಒಂದನ್ನು ನೋ ಪಾರ್ಕಿಂಗ್​ನಲ್ಲಿ ಜೋನ್​ನಲ್ಲಿ ನಿಲ್ಲಿಸಿರುವುದನ್ನು ಕಂಡು ಕರೌರಿ ಪೊಲೀಸ್​ ಠಾಣಾಧಿಕಾರಿ ಅದರ ಮಾಲೀಕನಿಗೆ ದಂಡ ವಿಧಿಸಿದ್ದಾರೆ. ದಂಡದ ರಶೀಸಿ ಪಡೆದು ವಾಹನವನ್ನು ಬೇರೆಡೆ ನಿಲ್ಲಿಸಿದ ಮಾಲೀಕ ಕೂಡಲೇ ಅದಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಬೆಂಕಿಯನ್ನು ನಂದಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಘಟನೆ ನಡೆದಾಗ ಆಟೋ ಚಾಲಕ ಪಾನಮತ್ತನಾಗಿದ್ದ ಎಂದು ಹೇಳಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆತನಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net