

ಬೆಂಗಳೂರು: ದೆಹಲಿ ಭೇಟಿಯಿಂದ ಸೃಷ್ಟಿಯಾಗಿರುವ ಗೊಂದಲ ನಿವಾರಿಸಲೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ಭೇಟಿಯಾಗಿ ಎಲ್ಲ ಸ್ಪಷ್ಟಪಡಿಸುವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ದೆಹಲಿಯಿಂದ ಹಿಂತಿರುಗಿದ ಬಳಿಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ನಡೆಸಿದ ಮಾತುಕತೆ ಹಾಗೂ ಅವರಿಂದ ಸಿಕ್ಕಿರುವ ಸ್ಪಂದನೆ ಬಗ್ಗೆ ಸಿಎಂಗೆ ಮಾಹಿತಿ ನೀಡುವೆ ಎಂದರು. ಪೂರ್ವನಿಗದಿತ ಭೇಟಿ ಬಗ್ಗೆ ಸಿಎಂಗೆ ಹೇಳಿಯೇ ದೆಹಲಿಗೆ ಹೋಗಿದ್ದೆ. ರಾಜ್ಯಪಾಲ ವಜುಭಾಯಿ ವಾಲಾ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಯೋಗಕ್ಷೇಮ ವಿಚಾರಿಸಿ ಬೇಗ ಚೇತರಿಸಿಕೊಳ್ಳಿರಿ ಎಂದು ಹಾರೈಸಲು ಹೋಗಿದ್ದೆ ಎಂದು ಸ್ಪಷ್ಟಪಡಿಸಿದರು.
ಭ್ರಮೆಯಿಲ್ಲ: ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ, ನನ್ನ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗಿದ್ದಲ್ಲ. ಯಾರೋ ಮಸಾಲೆ, ಒಗ್ಗರಣೆ ಹಾಕಿದ್ದಾರೆಂದು ಹೇಳುವುದಿಲ್ಲ. ಆದರೆ ಸಿಎಂ ಅಭ್ಯರ್ಥಿ ಎಂಬ ಭ್ರಮೆ ನನಗಿಲ್ಲ. ಅಂತಹ ಯೋಚನೆಯನ್ನೂ ಮಾಡಿಲ್ಲ, ಈಗ ಆ ಬಗ್ಗೆ ಯೋಚಿಸುವ ಸನ್ನಿವೇಶವಿಲ್ಲ ಎಂದು ಸವದಿ ವಿವರಿಸಿದರು. ಸಾರಿಗೆ ಇಲಾಖೆ ಮತ್ತು ರಸ್ತೆ ತೆರಿಗೆ ವಿಚಾರವಾಗಿ ನಿತಿನ್ ಗಡ್ಕರಿ ಜತೆಗೆ ರ್ಚಚಿಸಿದ್ದು, ನಿರ್ಭಯ ಸ್ಕೀಮ್ ನಲ್ಲಿ ಹಣ ಬಿಡುಗಡೆ, ಅಥಣಿ ಕ್ಷೇತ್ರದ ರಸ್ತೆ ಕಾಮಗಾರಿ ವಿಷಯ ಪ್ರಸ್ತಾಪಿಸಿ ಇವೆಲ್ಲವುಗಳಿಗೆ ಅನುಮತಿ ನೀಡಬೇಕೆಂದು ಮನವಿ ಮಾಡಿರುವೆ. ಎಲೆಕ್ಟ್ರಿಕ್ ಬಸ್ಗಳ ಖರೀದಿ ಕುರಿತು ಸಚಿವ ಪ್ರಕಾಶ್ ಜಾವಡೇಕರ್ ಜತೆಗೆ ರ್ಚಚಿಸಿದ್ದು, ಬೆಂಗಳೂರಿಗೆ 300 ಮತ್ತು ಧಾರವಾಡಕ್ಕೆ 50 ಬಸ್ ಮಂಜೂರು ಮಾಡುವ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಡಿಸಿಎಂ ಸವದಿ ಮಾಹಿತಿ ನೀಡಿದರು.
ಸಂಪುಟ ವಿಸ್ತರಣೆ, ಪುನಾರಚನೆ ಸಿಎಂ ಪರಮಾಧಿಕಾರ. ಯಾರನ್ನು ಒಳಗೆ ಕರೆದುಕೊಳ್ಳಬೇಕು, ಯಾರನ್ನು ಹೊರಗೆ ಕಳಿಸಬೇಕು ಎನ್ನುವುದನ್ನು ಅವರು ತೀರ್ಮಾನ ಮಾಡುತ್ತಾರೆ. ಅವರು ವರಿಷ್ಠರ ಜತೆ ರ್ಚಚಿಸಿ ತೀರ್ವನಿಸುತ್ತಾರೆ. ಡಿಸಿಎಂ ಲಕ್ಷ್ಮಣ್ ಸವದಿ ದೆಹಲಿಗೆ ಹೋಗಿರುವುದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಕೆಲವೊಮ್ಮೆ ಕಾಕತಾಳೀಯ ಘಟನೆಗಳು ನಡೆಯುತ್ತವೆ. ಈಗ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆದಿಲ್ಲ. | ಸಿ.ಟಿ.ರವಿ ಕನ್ನಡ-ಸಂಸ್ಕೃತಿ ಸಚಿವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಗೆ ಹೋಗಿರುವ ಮಾಹಿತಿ ನನಗೆ ತಿಳಿದಿಲ್ಲ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಪುನರಾರಂಭದ ಓಡಾಟದಲ್ಲಿ ನಾನು ಮುಳುಗಿದ್ದೇನೆ. ಹೀಗಾಗಿ, ರಾಜಕೀಯ ವಿದ್ಯಮಾನಗಳನ್ನು ಗಮನಿಸಿಲ್ಲ. ಆದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. | ಮುರುಗೇಶ್ ನಿರಾಣಿ ಮಾಜಿ ಸಚಿವ