

ಹೊಸದಿಲ್ಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗುವಂತೆ ಐದನೇ ಬಾರಿಗೆ ಸಮನ್ಸ್ ನೀಡಿತ್ತು. ಆದ್ರೆ, ಸಮನ್ಸ್ ಅನ್ನು ಅಕ್ರಮ ಮತ್ತು ರಾಜಕೀಯ ಪಿತೂರಿಯ ಭಾಗ ಎಂದಿದ್ದ ಕೇಜ್ರಿವಾಲ್, ಐದನೇ ನೋಟಿಸ್ಗೂ ಪ್ರತಿಕ್ರಿಯಿಸದೆ, ಗೈರಾದರು. ಇದರ ಬೆನ್ನಲ್ಲೇ ಇಡಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಈ ಕುರಿತಂತೆ ದೂರು ದಾಖಲಿಸಿತು. ಕೂಡಲೇ ಆದೇಶ ಹೊರಡಿಸಿದ ಕೋರ್ಟ್, ಲಿಕ್ಕರ್ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.17 ರಂದು ಹಾಜರಾಗುವಂತೆ ತಿಳಿಸಿದೆ. ಕೋರ್ಟ್ ನೀಡಿದ ಆದೇಶದ ಬಗ್ಗೆ ಇದೀಗ ಆಮ್ ಆದ್ಮಿ ಪಕ್ಷ ಉತ್ತರಿಸಿದೆ.
ಈ ಕುರಿತು ನಾವು ನ್ಯಾಯಾಲಯದಲ್ಲಿ ನಮ್ಮ ನಿಲುವನ್ನು ಮಂಡಿಸುವುದಾಗಿ ಎಎಪಿ ಹೇಳಿದ್ದು, ಪಕ್ಷದ ನಾಯಕಿ ಮತ್ತು ದೆಹಲಿ ಸಚಿವೆ ಅತಿಶಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, "ನಮ್ಮ ಪಕ್ಷವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತದೆ ಮತ್ತು ತನಿಖಾ ಸಂಸ್ಥೆಯು ಐದು ಸಮನ್ಸ್‌ಗಳನ್ನು ಸಿಎಂ ಏಕೆ ತಪ್ಪಿಸಿದ್ದಾರೆ ಎಂಬುದನ್ನು ಕುರಿತು ತನ್ನ ನಿಲುವನ್ನು ಪ್ರಸ್ತುತಪಡಿಸಲಿದೆ" ಎಂದರು.
"ಇದಲ್ಲದೆ, ಜಾರಿ ನಿರ್ದೇಶನಾಲಯದ ಸಮನ್ಸ್ ಮುಖ್ಯಮಂತ್ರಿಗಳನ್ನು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯುವ ಮತ್ತು ಅವರನ್ನು ಬಂಧಿಸುವ ಪಿತೂರಿಯ ಭಾಗವಾಗಿದೆ ಎಂದು ಆರೋಪಿಸಿದ ಅತಿಶಿ, ಇಡಿಯಂತಹ ತನಿಖಾ ಸಂಸ್ಥೆಗಳನ್ನು ಬಳಸಿ, ಬಿಜೆಪಿಯು ದೆಹಲಿ ಸಿಎಂ ಅವರನ್ನು ಬಂಧಿಸುವ ಯೋಜನೆ ಹಾಕಿಕೊಂಡಿದೆ" ಎಂದು ಹೇಳಿದರು.
"ಇಡಿ ಕಳುಹಿಸಿದ ಎಲ್ಲಾ ಐದು ಸಮನ್ಸ್‌ಗಳು ಶೇಕಡಾ 100 ರಷ್ಟು ಕಾನೂನುಬಾಹಿರ. ಇದನ್ನು ನಾವು ನ್ಯಾಯಾಲಯಕ್ಕೆ ತಿಳಿಸುತ್ತೇವೆ. ಇಡಿಯಿಂದ ಬಂದಿರುವ ಪ್ರತಿ ಸಮನ್ಸ್ ಸ್ವೀಕರಿಸಿದ ಸಿಎಂ, ಅದರಲ್ಲಿರುವ ಅಕ್ರಮ ಅಂಶಗಳನ್ನು ಲಿಖಿತ ರೂಪದಲ್ಲಿ ಬರೆದು ವಿವರಿಸಿದ್ದಾರೆ. "ಇಡಿ ತನ್ನ ಸಮನ್ಸ್‌ನ ಕಾನೂನುಬದ್ಧತೆಯನ್ನು ಸ್ಥಾಪಿಸಲು ಯಾವುದೇ ಪುರಾವೆಗಳನ್ನು ಹೊಂದಿಲ್ಲ" ಎಂದರು,(ಏಜೆನ್ಸೀಸ್).