More

    ಐಸಿಸಿ ಟೆಸ್ಟ್ ಬೌಲಿಂಗ್ ಬುಮ್ರಾಗೆ ವಿಶ್ವ ನಂ.1 ಪಟ್ಟ: ಕಪಿಲ್ ದೇವ್ ಸಾಧನೆ ಮುರಿದ ವೇಗಿ

    ದುಬೈ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಗಿ ಎನಿಸಿದ್ದಾರೆ. ಜತೆಗೆ ಎಲ್ಲ ಮೂರು ಕ್ರಿಕೆಟ್ ಪ್ರಕಾರದ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ. 1 ಪಟ್ಟಕ್ಕೇರಿದ ಮೊಟ್ಟಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಬುಧವಾರ ಐಸಿಸಿ ಬಿಡುಗಡೆ ಮಾಡಿದ ಪರಿಷ್ಕೃತ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೂರು ಸ್ಥಾನ ಏರಿಕೆ ಕಂಡ ಜಸ್‌ಪ್ರೀತ್ ಬುಮ್ರಾ ವಿಶ್ವ ನಂ.1 ಸ್ಥಾನಕ್ಕೇರುವ ಮೂಲಕ ಭಾರತದವರೇ ಆದ ಅನುಭವಿ ಆ್ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬುಮ್ರಾ ಇದಕ್ಕೂ ಮೊದಲು ಮೂರನೇ ಸ್ಥಾನಕ್ಕೇರಿದ್ದೇ ಗರಿಷ್ಠ ಸಾಧನೆ ಆಗಿತ್ತು.

    30 ವರ್ಷದ ಜಸ್‌ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ 881 ಪಾಯಿಂಟ್ ಕಲೆಹಾಕಿ ಅಗ್ರಸ್ಥಾನಕ್ಕೇರಿದ್ದರೆ, ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ (851) 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ವಿಶಾಖಪಟ್ಟಣ ಟೆಸ್ಟ್‌ನಲ್ಲಿ ಕೇವಲ 3 ವಿಕೆಟ್ ಪಡೆದ ಆರ್. ಅಶ್ವಿನ್ (841) ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ (828) 3ರಿಂದ 4ನೇ ಸ್ಥಾನಕ್ಕಿಳಿದಿದ್ದಾರೆ. ಅಶ್ವಿನ್ ಕಳೆದ ವರ್ಷ ಮಾರ್ಚ್‌ನಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದರು.

    ವಿಶಾಖಪಟ್ಟಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 91 ರನ್‌ಗಳಿಗೆ 9 ವಿಕೆಟ್ ಪಡೆದ ಬುಮ್ರಾ, ಟೀಮ್ ಇಂಡಿಯಾ ಸರಣಿಯಲ್ಲಿ 1-1 ಸಮಬಲಗೊಳಿಸಲು ಪ್ರಮುಖ ಕಾರಣ ಎನಿಸಿದ್ದರು. ಇದಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 150 ವಿಕೆಟ್ ಪೂರೈಸಿದ ಭಾರತೀಯ ವೇಗಿ ಎಂಬ ಗರಿಮೆಯೂ ಅವರದಾಗಿತ್ತು.
    2022ರಲ್ಲಿ ಮೊದಲ ಬಾರಿಗೆ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಪಡೆದಿದ್ದ ಬುಮ್ರಾ, ಸದ್ಯ ಏಕದಿನದಲ್ಲಿ ಆರನೇ ಸ್ಥಾನದಲ್ಲಿದ್ದರೆ, ಇತ್ತೀಚೆಗೆ ಹೆಚ್ಚಿನ ಟಿ20 ಆಡದ ಕಾರಣ 100ನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಕಪಿಲ್ ಸಾಧನೆ ಮುರಿದ ಬುಮ್ರಾ: ಮಾಜಿ ನಾಯಕ ಕಪಿಲ್ ದೇವ್ 1979ರಿಂದ 1980ರವರೆಗೆ ಎರಡನೇ ಸ್ಥಾನ ಅಲಂಕರಿಸಿದ್ದು, ಐಸಿಸಿ ಟೆಸ್ಟ್ ಬೌಲರ್‌ಗಳ ರ‌್ಯಾಂಕಿಂಗ್‌ನಲ್ಲಿ ಭಾರತದ ವೇಗದ ಬೌಲರ್ ಇದುವರೆಗೆ ಗಳಿಸಿದ ಅತ್ಯುತ್ತಮ ಸ್ಥಾನವಾಗಿತ್ತು. ಎಡಗೈ ವೇಗಿ ಜಹೀರ್ ಖಾನ್ 2010ರಲ್ಲಿ 3ನೇ ಸ್ಥಾನ ಪಡೆದಿದ್ದು ನಂತರ ಗರಿಷ್ಠ ಸ್ಥಾನವಾಗಿತ್ತು. ಬುಮ್ರಾ ಅದನ್ನೀಗ ಹಿಮ್ಮೆಟ್ಟಿಸಿ ಅಗ್ರಸ್ಥಾನಕ್ಕೇರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಗಿ ಎನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts