

ಬೆಂಗಳೂರು: ವಿದೇಶದಿಂದ ವನ್ಯಜೀವಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬ್ಯಾಂಕಾಕ್‌ನಿಂದ ಬುಧವಾರ ರಾತ್ರಿ ಕೆಐಎ ವಿಮಾನ ನಿಲ್ದಾಣಕ್ಕೆ ಬಂದು ಏರ್ ಏಷ್ಯಾ ವಿಮಾನದಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ ವನ್ಯಜೀವಿಗಳನ್ನು ಬಚ್ಚಿಟ್ಟುಕೊಂಡು ತರಲಾಗಿತ್ತು. ಲಗೇಜ್ ಪರಿಶೀಲನೆ ವೇಳೆ ಅನುಮಾನ ಬಂದು ಬ್ಯಾಗ್ ತೆಗೆದಾಗ ವಿವಿಧ ಬಣ್ಣದ 55 ಹೆಬ್ಬಾವು ಮರಿಗಳು, ಕಾಳಿಂಗ ಸರ್ಪದ 17 ಮರಿಗಳು, 6 ಅಪರೂಪದ ಕೋತಿಮರಿಗಳು ಸೇರಿದಂತೆ 78 ವನ್ಯಜೀವಿಗಳು ಪತ್ತೆಯಾಗಿವೆ. ಈ ಪೈಕಿ 72 ವನ್ಯಜೀವಿಗಳು ಜೀವಂತವಾಗಿದ್ದು, 6 ಕೋತಿಮರಿಗಳು ಸಾವನಪ್ಪಿವೆ.
ಜೀವಂತ ವನ್ಯಜೀವಿಗಳನ್ನು ಮೂಲ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ಮೃತ ವನ್ಯಜೀವಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.