

ಬೆಂಗಳೂರು: ಅನಧಿಕೃತ ವಿದ್ಯುತ್ ತಂತಿ ಬೇಲಿ ಸ್ಪರ್ಶದಿಂದ ವನ್ಯಜೀವಿ ಮೃತಪಡುತ್ತಿರುವ ಕುರಿತು ವರದಿ ಸಲ್ಲಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರಣ್ಯದ ಅಂಚಿನಲ್ಲಿರುವ ತೋಟಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ವಿದ್ಯತುಗ್ ತಂತಿಬೇಲಿ ಸ್ಪರ್ಶದಿಂಧ ಕಾಡಾನೆ ಸೇರಿದಂತೆ ಹಲವು ವನ್ಯಜೀವಿಗಳು ಮೃತಪಡುತ್ತಿವೆ.
ಈ ಕುರಿತು ಮರಣೋತ್ತರ ಪರೀಕ್ಷೆ ಹಾಗೂ ಆಡಿಟ್ ಮಾಡಿ ವರದಿ ಸಲ್ಲಿಸಬೇಕು. ಜತೆಗೆ ಐದು ವರ್ಷಗಳಲ್ಲಿ ಅಕ್ರಮ ವಿದ್ಯುತ್ ಸ್ಪರ್ಶದಿಂದ ಮತ್ತು ಬೇಲಿ ಉರುಳಿಗೆ ಸಿಲುಕಿ ಅಸಹಜವಾಗಿ ಎಷ್ಟು ವನ್ಯಜೀವಿಗಳು ಮೃತಪಟ್ಟಿವೆ? ಈ ಪ್ರಕರಣಗಳಲ್ಲಿ ಕೈಗೊಂಡಿರುವ ಕ್ರಮವೇನು? ಈ ಪ್ರಕ್ರಿಯೆ ಯಾವ ಹಂತದಲ್ಲಿದೆ? ಎಷ್ಟು ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂಬ ಸಮಗ್ರ ವರದಿಯನ್ನು 10 ದಿನಗ ಒಳಗಾಗಿ ಸಲ್ಲಿಸಲು ಸಹ ಸಚಿವ ಖಂಡ್ರೆ ನಿರ್ದೇಶನ ನೀಡಿದ್ದಾರೆ.
ಪಶ್ಚಿಮಘಟ್ಟ ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಹನಗಳ ರ‌್ಯಾಲಿ ನಡೆಸಿದರೆ ಅಂತಹವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.