ಕಾಡಾನೆಗಳು ದಾಳಿ ನಡೆಸಿ ಸೋಲಾರ್ ಗೇಟು, ಬೆಳೆ ನಾಶ

08-JULY-GPT-2
ಗುಂಡ್ಲುಪೇಟೆ ತಾಲೂಕಿನ ದೇಶೀಪುರ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಜಮೀನಿಗೆ ಅಳವಡಿಸಿದ್ದ ಗೇಟುಗಳು ಧ್ವಂಸವಾಗಿವೆ.
Published on

ಗುಂಡ್ಲುಪೇಟೆ: ತಾಲೂಕಿನ ದೇಶೀಪುರ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ರೈತರ ಜಮೀನಿನ ಬೆಳೆಗಳ ರಕ್ಷಣೆ ಅಳವಡಿಸಿದ್ದ ಸೋಲಾರ್ ಗೇಟುಗಳು ಮತ್ತು ಬೆಳೆಗಳನ್ನು ನಾಶಪಡಿಸಿವೆ.

ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಮಲ್ಲಪ್ಪ ಎಂಬ ರೈತರ ಜಮೀನಿಗೆ ಸೋಮವಾರ ತಡರಾತ್ರಿ ದಾಳಿ ನಡೆಸಿದ ಮೂರು ಆನೆಗಳ ಹಿಂಡು ಇತ್ತೀಚೆಗೆ ಅಳವಡಿಸಿದ್ದ ಗೇಟ್ ಹಾಗೂ ತಂತಿಕಂಬಗಳನ್ನು ಮುರಿದುಹಾಕಿ ಒಳಗೆ ನುಗ್ಗಿವೆ. ಜಮೀನಿನಲ್ಲಿ ಬೆಳೆದಿದ್ದ ಫಸಲು ಹಾಗೂ ತೆಂಗಿನ ಸಸಿಗಳನ್ನು ನಾಶಪಡಿಸಿವೆ. ಇದರಿಂದ ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪದೆ ಪದೇ ಆನೆಗಳು ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಅವುಗಳನ್ನು ಕಾಡಿಗಟ್ಟಲು ಕ್ರಮಕೈಗೊಳ್ಳುತ್ತಿಲ್ಲ. ಸೋಮವಾರ ಸಂಜೆ ಸಮೀಪದಲ್ಲಿಯೇ ಆನೆಗಳು ಮೇಯುತ್ತಿರುವ ಬಗ್ಗೆ ಸಿಬ್ಬಂದಿ ಗಮನಕ್ಕೆ ತಂದರೂ ಪಟಾಕಿ ಸಿಡಿಸಿ ಅವುಗಳನ್ನು ಓಡಿಸಲು ಮುಂದಾಗಿಲ್ಲ. ರಾತ್ರಿ ಗಸ್ತು ನಡೆಸುವುದಾಗಿ ಕ್ಯಾಂಪಿಗೆ ಬರುವ ಸಿಬ್ಬಂದಿ ಜಮೀನಿನ ಕೂಗಳತೆ ದೂರದಲ್ಲಿ ಕಳ್ಳಬೇಟೆ ತಡೆ ಶಿಬಿರವಿದ್ದರೂ ನಮ್ಮ ನೆರವಿಗೆ ಬರಲಿಲ್ಲ. ಇದರಿಂದ ಪ್ರತಿ ಬಾರಿ ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆಗಳು ವನ್ಯಜೀವಿಗಳ ಪಾಲಾಗುತ್ತಿವೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net