

ಹನೂರು: ತಾಲೂಕಿನ ಕಾಡಂಚಿನ ಸೋಲಿಗರ ಹಾಡಿಯ ಸೇಬಿನಕೋಬೆಯ ಜಮೀನೊಂದಕ್ಕೆ ಮಂಗಳವಾರ ರಾತ್ರಿ ಕಾಡಾನೆಗಳು ಲಗ್ಗೆ ಇಟ್ಟು ಮುಸುಕಿನ ಜೋಳ ಹಾಗೂ ರಾಗಿ ಫಸಲನ್ನು ನಾಶಪಡಿಸಿವೆ.
ಹಾಡಿಯ ಮಾದೇಗೌಡ ಅವರು 4 ಎಕರೆ ಜಮೀನ ಪೈಕಿ ಮೂರೂವರೆ ಎಕರೆಯಲ್ಲಿ ಮುಸುಕಿನ ಜೋಳ ಹಾಗೂ ಅರ್ಧ ಎಕರೆಯಲ್ಲಿ ರಾಗಿಯನ್ನು ಬೆಳೆದಿದ್ದು, ತೆನೆ ಬಂದಿವೆ. ಕಟಾವಿನ ಹಂತದಲ್ಲಿತ್ತು. ಆದರೆ ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ 2 ಕಾಡಾನೆಗಳು ಜಮೀನಿಗೆ ಲಗ್ಗೆ ಇಟ್ಟು ಸುಮಾರು 1 ಎಕರೆಯಲ್ಲಿ ಮುಸುಕಿನ ಜೋಳದ ಫಸಲನ್ನು ತಿಂದು ಹಾಕಿದೆ. ಅರ್ಧ ಎಕರೆಯಲ್ಲಿ ರಾಗಿ ಫಸಲನ್ನು ತುಳಿದು ನಾಶ ಪಡಿಸಿವೆ. ಬಳಿಕ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ಕಾಡಾನೆಗಳನ್ನು ಹನುಮಮ್ಮ ಹಾಗೂ ಸಮೀಪದಲ್ಲಿ ವಾಸವಿರುವ ಸಿದ್ದಮ್ಮ ಅವರು ಜೀವಭಯದಿಂದ ಕಾಡಿಗೆ ಓಡಿಸಿದ್ದಾರೆ. ದಾಳಿಯಿಂದ ಸಾವಿರಾರು ರೂ. ನಷ್ಟ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ರೈತ ಮಾದೇಗೌಡ ಒತ್ತಾಯಿಸಿದ್ದಾರೆ.
ಕಡಿವಾಣಕ್ಕೆ ಒತ್ತಾಯ: ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಈ ಹಾಡಿಯ ಜಮೀನುಗಳಿಗೆ ರಾತ್ರಿ ವೇಳೆ ಕಾಡಾನೆ ಹಾಗೂ ಹಂದಿಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಜೀವಭಯ ಮನೆ ಮಾಡಿದ್ದು, ಮರದ ಮೇಲೆ ಕಾವಲು ಕಾಯುವಂತಹ ಪರಿಸ್ಥಿತಿ ಇದೆ. ಇತ್ತ ಮನೆಗಳ ಸಮೀಪ ಆಗಮಿಸುತ್ತಿವೆ. ಇದರಿಂದ ಜೀವಭಯದ ಆತಂಕ ಕಾಡುತ್ತಿದೆ.ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕುವಂತೆ ರೈತರು ಒತ್ತಾಯಿಸಿದ್ದಾರೆ.