

ಸೂರತ್: ತೂಕ ಹೆಚ್ಚಿಸುವುದು ಮತ್ತು ತೂಕ ಇಳಿಸುವುದು ಎರಡೂ ಬಹುದೊಡ್ಡ ಕಷ್ಟದ ಕೆಲಸಗಳೇ. ತೂಕ ಇಳಿಸಲು ಅನೇಕರು ಏರೋಬಿಕ್ಸ್, ಭೌಷಧ, ಡಾಕ್ಟರ್ ಮೊರೆ ಹೋಗುತ್ತಾರೆ. ಅದೇ ರೀತಿ ತೂಕ ಇಳಿಸುವುದಕ್ಕೆಂದು ವೈದ್ಯರ ಮೊರೆ ಹೋದ ಮಹಿಳೆಯೊಬ್ಬಳು ತೂಕ ಇಳಿಸಿಕೊಳ್ಳಲು ವಿಫಲವಾಗಿದ್ದಕ್ಕೆ ಆಕೆಯ ಪತಿರಾಯ ವೈದ್ಯನ ಕಥೆಯನ್ನೇ ಮುಗಿಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಗುಜರಾತ್ನ ಸೂರತ್ನ ಶಾಲಾ ಶಿಕ್ಷಕ ಮನೋಜ್ ಧುಧಗರ ಅವರ ಪತ್ನಿ ಕೆಲ ತಿಂಗಳ ಹಿಂದೆ ಡಾ.ಅಜಯ್ ಮೊರಾಡಿಯಾ ಬಳಿ ಚಿಕಿತ್ಸೆ ಪಡೆದಿದ್ದರು. ತೂಕ ಇಳಿಸುವುದಕ್ಕಾಗಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿರೀಕ್ಷೆಯಷ್ಟು ತೂಕ ಇಳಿಕೆಯಾಗಿಲ್ಲ. ಇದರಿಂದ ಬೇಸತ್ತ ಮನೋಜ್ ವೈದ್ಯನ ಬಳಿ ಮತ್ತೆ ಬಂದಿದ್ದಾನೆ. ನಾವು ಕೊಟ್ಟ ಹಣವನ್ನು ವಾಪಾಸು ಕೊಡು ಎಂದು ಒತ್ತಾಯಿಸಿದ್ದಾನೆ. ಆದರೆ ಹಣ ವಾಪಾಸು ಮಾಡಲು ವೈದ್ಯ ಒಪ್ಪಿಲ್ಲ.
ವೈದ್ಯನ ಮೇಲೆ ದ್ವೇಷ ಬೆಳೆಸಿಕೊಂಡ ಮನೋಜ್ ವೈದ್ಯನ ಮೇಲೆ ಬ್ಲೇಡ್ನಿಂದ ಹಲ್ಲೆ ಮಾಡಿದ್ದಾನೆ. ವೈದ್ಯನ ಕುತ್ತಿಗೆಯನ್ನು ಬ್ಲೇಡ್ನಿಂದ ಕೊಯ್ದಿದ್ದಾನೆ. ಆತನ ವ್ಯಾಲೆಟ್ನಲ್ಲಿದ್ದ 1500 ರೂಪಾಯಿಯನ್ನು ತೆಗೆದುಕೊಂಡು ಮನೋಜ್ ಪರಾರಿಯಾಗಿದ್ದಾನೆ. ವೈದ್ಯನ ಕುತ್ತಿಗೆಯಲ್ಲಿ ರಕ್ತ ಹರಿಯುತ್ತಿರುವುದನ್ನು ಕಂಡು ತಕ್ಷಣ ಆತನನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ. ಮನೋಜ್ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. (ಏಜೆನ್ಸೀಸ್)