

ನಾಗಮಂಗಲ: ತಾಲೂಕಿನ ಸೋಮನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಮಂಗಳವಾರ ಸಂಜೆ ಮೃತಪಟ್ಟ ವೃದ್ಧೆಯ ಅಂತ್ಯಕ್ರಿಯೆಯನ್ನು ಗಂಟಲು ದ್ರವ ಪರೀಕ್ಷೆಯ ವರದಿ ಬರುವ ಮುನ್ನವೇ ಸ್ವಗ್ರಾಮ ಜುಟ್ಟನಹಳ್ಳಿ ಹೊರವಲಯದ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿಸಲಾಯಿತು.
ಮುಂಬೈನಿಂದ ಮೇ 17ರಂದು 66 ವರ್ಷದ ಈ ವೃದ್ಧೆ ತಾಲೂಕಿಗೆ ಆಗಮಿಸಿದ್ದರು. ಆಕೆಯನ್ನು ಆರೋಗ್ಯ ತಪಾಸಣೆಗೊಳಪಡಿಸಿದ ನಂತರ ತಾಲೂಕಿನ ಸೋಮನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಗಂಟಲು ದ್ರವ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಸಂಜೆ ಹೃದಯಾಘಾತದಿಂದ ಆಕೆ ಮೃತಪಟ್ಟಿದ್ದರು.
ಬುಧವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ದೇಹವನ್ನು ಸ್ವಗ್ರಾಮ ಜುಟ್ಟನಹಳ್ಳಿಯ ಅವರ ಜಮೀನಿಗೆ ತಂದು, ಅಧಿಕಾರಿಗಳು ಮತ್ತು ಕ್ವಾರಂಟೈನ್‌ನಲ್ಲಿದ್ದ ಪತಿಯ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಮಧ್ಯೆ, ವೃದ್ಧೆಯ ಶವವನ್ನು ಆಂಬುಲೆನ್ಸ್‌ನಲ್ಲಿ ತರುವಾಗ ಶವದ ಮೈಮೇಲಿದ್ದ ಚಿನ್ನಾಭರಣಗಳನ್ನು ಆಕೆಯ ಪತಿ ಬಿಚ್ಚಿಕೊಂಡರು. ಗ್ಲೌಸ್ ಮತ್ತಿತರ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಆಭರಣಗಳನ್ನು ಕಳಚಿಕೊಂಡಿದ್ದು ಆತಂಕಕಾರಿ ಬೆಳವಣಿಯಾಗಿದೆ. ಒಂದು ವೇಳೆ ವೃದ್ಧೆಗೆ ಸೋಂಕು ದೃಢಪಟ್ಟರೆ ಈತನ ಕೃತ್ಯ ತಾಲೂಕು ಆಡಳಿತಕ್ಕೆ ತಲೆನೋವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.