ಪತಿಯನ್ನು ಕೊಂದು ಮನೆಯ ಆವರಣದಲ್ಲಿ ಹೂತಿಟ್ಟ ಪತ್ನಿ: ವಿಚಾರಣೆಯ ವೇಳೆ ಆಕೆ ಹೇಳಿದ್ದೇನು ಗೊತ್ತಾ? | Assam

Assam
Published on

Assam: ಪತಿಯನ್ನು ಕೊಂದು ಮನೆಯ ಆವರಣದಲ್ಲಿ ಶವವನ್ನು ಹೂತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

ಗುವಾಹಟಿ ಪೊಲೀಸರು ಭಾನುವಾರ 38 ವರ್ಷದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ರಹೀಮಾ ಖತುನ್ ತನ್ನ ಪತಿ ಸಬಿಯಾಲ್ ರೆಹಮಾನ್ (40) ಜೊತೆ ಜಗಳದ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮೃತ ಸಬಿಯಾಲ್ ರೆಹಮಾನ್ ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 26 ರಂದು, ಅವರು ಕೆಲಸ ಮುಗಿಸಿ ಅಸ್ಸಾಂ ರಾಜಧಾನಿಯ ಪಾಂಡು ಪ್ರದೇಶದಲ್ಲಿರುವ ತಮ್ಮ ಮನೆಗೆ ಮರಳಿದರು. ರಹೀಮಾ ತನ್ನ ಪತಿ ಕುಡಿದ ಅಮಲಿನಲ್ಲಿದ್ದಾಗ ಕೌಟುಂಬಿಕ ಜಗಳ ನಡೆದು ನಂತರ ಅದು ದೈಹಿಕ ಹಲ್ಲೆಗೆ ತಿರುಗಿದೆ. ಪತಿ ಸಾವನ್ನಪ್ಪಿದ ನಂತರ, ಮನೆಯ ಆವರಣದಲ್ಲಿಯೇ ಸುಮಾರು ಐದು ಅಡಿ ಆಳದ ಗುಂಡಿಯನ್ನು ಅಗೆದು ಶವವನ್ನು ಹೂತುಹಾಕಿದ್ದೇನೆ ಎಂದು ರಹೀಮಾ ತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ.

ಈ ದಂಪತಿಗಳು ಮದುವೆಯಾಗಿ 15 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹಲವಾರು ದಿನಗಳಿಂದ ರೆಹಮಾನ್ ಅವರನ್ನು ನೋಡದಿದ್ದಾಗ ನೆರೆಹೊರೆಯವರು ಅನುಮಾನ ವ್ಯಕ್ತಪಡಿಸಿದ ನಂತರ ಈ ಪ್ರಕರಣ ವರದಿಯಾಗಿದೆ. ಆರೋಪಿಯು ಆರಂಭದಲ್ಲಿ ತನ್ನ ಪತಿ ಕೆಲಸದ ನಿಮಿತ್ತ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾಗಿ ಹೇಳಿಕೊಂಡಿದ್ದಾಳೆ. ಆದರೆ ರಹೀಮಾ ಒಬ್ಬಂಟಿಯಾಗಿ ಈ ಕೃತ್ಯ ಮಾಡಿಲ್ಲವೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

"ಒಬ್ಬ ಮಹಿಳೆ ತಾನೇ ಇಷ್ಟೊಂದು ದೊಡ್ಡ ಗುಂಡಿ ತೋಡುವುದು ಅಸಂಭವ. ಇತರ ಶಂಕಿತರ ಭಾಗಿಯಾಗಿರುವ ಸಾಧ್ಯತೆಯನ್ನು ನಾವು ಪರಿಶೀಲಿಸುತ್ತಿದ್ದೇವೆ" ಎಂದು ಡಿಸಿಪಿ ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net