

ಉತ್ತರಪ್ರದೇಶ: ಎಂದಿನಂತೆ ಪತ್ನಿಗೆ ಒಂದು ಕಪ್ ಟೀ ಮಾಡಿಕೊಡು ಎಂದು ಕೇಳುವ ಪತಿ ಅಂದು ಕೂಡ ಒಂದು ಲೋಟ ಚಹಾ ಕೊಡು ಎಂದಿದ್ದಾನೆ. ಇದನ್ನು ಕೇಳಿಸಿಕೊಂಡ ಪತ್ನಿ ಗಂಡನ ಕಣ್ಣಿಗೆ ಕತ್ತರಿಯಿಂದ ತಿವಿದು, ಸ್ಥಳದಿಂದ ಪರಾರಿಯಾದ ಭಯಾನಕ ಘಟನೆ ಉತ್ತರಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ವರದಿಯಾಗಿದೆ.
ಪತಿಯ ಕಣ್ಣಿಗೆ ಕತ್ತರಿಯಿಂದ ತಿವಿದ ಹೆಂಡತಿ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾಳೆ. ಕಣ್ಣುಗಳಿಗೆ ಬಲವಾದ ಪೆಟ್ಟು ಬಿದ್ದ ಕಾರಣ, ವ್ಯಕ್ತಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಸದ್ಯ ಈ ಪ್ರಕರಣ ಇದೀಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಘಟನೆಯ ವಿವರ: ಗಂಭೀರ ಗಾಯಕ್ಕೊಳಗಾದ ವ್ಯಕ್ತಿಯನ್ನು ಅಂಕಿತ್ ಎಂದು ಗುರುತಿಸಲಾಗಿದ್ದು, ಮೂರು ವರ್ಷಗಳ ಹಿಂದಷ್ಟೇ ಆರೋಪಿ ಮಹಿಳೆಯನ್ನು ಮದುವೆಯಾಗಿದ್ದನು. ಆದಾಗ್ಯೂ, ಸ್ವಲ್ಪ ಸಮಯದ ಬಳಿಕ ದಂಪತಿಗಳು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಪದೇ ಪದೇ ಜಗಳವಾಡುತ್ತಿದ್ದರು. ಈ ಘಟನೆ ನಡೆಯುವ ಮೂರು ದಿನಗಳ ಮೊದಲು ಅಂಕಿತ್ ಪತ್ನಿ, ಗಂಡ ಮತ್ತು ಆತನ ಕುಟುಂಬದ ವಿರುದ್ಧ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ಮನೆಗೆ ಬಂದ ಅಂಕಿತ್ ಪತ್ನಿಗೆ ಒಂದು ಕಪ್ ಟೀ ಕೇಳಿದ್ದು, ಇದರಿಂದ ಕೋಪಗೊಂಡ ಹೆಂಡತಿ ಆತನ ಕಣ್ಣಿಗೆ ಕತ್ತರಿಯಿಂದ ಇರಿದಿದ್ದಾಳೆ. ಈ ವೇಳೆ ಅಂಕಿತ್ನ ಕಿರುಚಾಟ ಆಲಿಸಿದ ಅತ್ತಿಗೆ ಮತ್ತು ಮಕ್ಕಳು ತಮ್ಮ ಮನೆಯಿಂದ ಓಡಿ ಬಂದು ಶೀಘ್ರವೇ ಆಸ್ಪತ್ರೆಗೆ ಸಾಗಿಸಿದ್ದು, ಘಟನೆಯ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆದ್ರೆ, ಸ್ಥಳಕ್ಕೆ ಪೊಲೀಸರು ಬರುವಷ್ಟರೊಳಗೆ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ. ಇದೀಗ ಮಹಿಳೆಯ ಪತ್ತೆಗೆ ತಂಡಗಳನ್ನು ರಚಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ,(ಏಜೆನ್ಸೀಸ್).