ವರದಕ್ಷಿಣೆಗೆ ಪತ್ನಿ ಬಲಿ; ಪತಿಗೆ 8 ವರ್ಷ ಜೈಲು

Family Court
Published on

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿ 71ನೇ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಜೆ.ಪಿ. ನಗರದ ಜರಗನಹಳ್ಳಿ ನಿವಾಸಿ ವನ್ಯಾಶ್ರೀ ಮೃತೆ. ಈಕೆಯ ಪತಿ ಭರತ್‌ಗೆ 8 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಧೀಶ ಬಾಲಚಂದ್ರ ಭಟ್ ತೀರ್ಪು ನೀಡಿದ್ದಾರೆ. ಸಂತ್ರಸ್ತೆ ಪರವಾಗಿ ಸರ್ಕಾರಿ ಅಭಿಯೋಜಕಿ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು. 2010ರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವನ್ಯಾಶ್ರೀ ಮತ್ತು ಭರತ್ ಪ್ರೀತಿಸಿ ಮೈಸೂರಿನ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

ಬಳಿಕ ಯುವತಿ ಕುಟುಂಬಸ್ಥರು ಬನ್ನೇರುಘಟ್ಟ ರಸ್ತೆಯ ಕಲ್ಯಾಣ ಮಂಟಪದಲ್ಲಿ ಚಿನ್ನದ ನೆಕ್ಲೇಸ್, 2 ಉಂಗುರ, ಮುತ್ತಿನ ಓಲೆ, ಜುಮುಕಿ ಸೇರಿ ವಿವಿಧ ಬಗೆಯ ಚಿನ್ನಾಭರಣ, 2 ಲಕ್ಷ ರೂ. ವರದಕ್ಷಿಣೆ ಕೊಟ್ಟು ಮದುವೆ ಮಾಡಿದ್ದರು. ವರ್ಷದ ಬಳಿಕ ಮತ್ತೆ 10 ಲಕ್ಷ ರೂ. ತಂದು ಕೊಡುವಂತೆ ಭರತ್ ಒತ್ತಾಯಿಸುತ್ತಿದ್ದ. ಇಲ್ಲವಾದರೆ ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಕಿರುಕುಳ ಕೊಡುತ್ತಿದ್ದ.

ನೊಂದ ವನ್ಯಾಶ್ರೀ, 2014ರ ಜ.23ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೆ.ಪಿ. ನಗರ ಪೊಲೀಸರು ಭರತ್‌ನನ್ನು ಬಂಧಿಸಿ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net