

ಬಾಗಲಕೋಟೆ: ಗಂಡ ಬೇಕು.. ನನಗೆ ಗಂಡ ಬೇಕೇಬೇಕು, ನನಗೆ ಅನ್ಯಾಯ ಆಗಿದೆ.. ನ್ಯಾಯ ಬೇಕು ಎನ್ನುತ್ತ ತನ್ನ ಪುಟ್ಟ ಮಗಳೊಂದಿಗೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿ ಗ್ರಾಮದ ನಿವಾಸಿ ಮಹಿಳೆಯೊಬ್ಬರು ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ಧರಣಿಗೆ ಕುಳಿತಿದ್ದಾರೆ.
ಧರಣಿ ಕೂತ ಮಹಿಳೆ ವಿದ್ಯಾ ಶಿಂದೋಳಿಮಠ. ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿದ್ಯಾ ತವರು ಮನೆಗೆ ಹೋಗಿದ್ದಳು. ಬಳಿಕ ಗಂಡನೂ ಆಕೆಯನ್ನು ವಾಪಸ್ ಕರೆದಿಲ್ಲ. ಕೊನೆಗೆ ಮನೆಗೆ ಬರುವೆ ಎಂದರೂ ಆತ ಒಪ್ಪಿಲ್ಲ. ಬೇರೆ ದಾರಿಕಾಣದ ಆಕೆ ತನ್ನ ತಂದೆ ಮತ್ತು ಚಿಕ್ಕ ಮಗಳೊಂದಿಗೆ ಗಂಡನ ಮನೆಗೆ ಗುರುವಾರ ಬೆಳಗ್ಗೆ ಬಂದಿದ್ದಾಳೆ.
ಪತ್ನಿ ವಿದ್ಯಾ ಬರುವ ವಿಷಯ ತಿಳಿಯುತ್ತಿದ್ದಂತೆ ಮನೆಗೆ ಬೀಗ ಹಾಕಿಕೊಂಡು ಆಕೆಯ ಪತಿ ಮತ್ತು ಕುಟುಂಬಸ್ಥರು ಹೊರಹೋಗಿದ್ದಾರೆ. ಗಂಡನ ಜತೆಯಲ್ಲೇ ಬಾಳಬೇಕು. ನನಗೆ ಅನ್ಯಾಯ ಆಗುತ್ತಿದೆ... ನ್ಯಾಯ ಕೊಡಿಸಿ ಎಂದು ಗೋಗರೆಯುತ್ತ ವಿದ್ಯಾ, ಗಂಡನ ಮನೆ ಬಾಗಿಲ ಮುಂದೆ ಕುಳಿತು ಧರಣಿ ನಡೆಸಿದರು. ಮಧ್ಯಾಹ್ನವಾದರೂ ಗಂಡ ಸ್ಥಳಕ್ಕೆ ಬಾರಲೇ ಇಲ್ಲ. ಪಟ್ಟು ಬಿಡದೆ ಕುಳಿತ ಆಕೆ ಧರಣಿ ಮುಂದುವರಿಸಿದ್ದಾಳೆ.