

ಲಖನೌ: ಪತ್ನಿಯ ಎದುರೇ ಪ್ರೇಯಸಿ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಉತ್ತರಪ್ರದೇಶದ ಇಟಾವಾದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ರಾಘವೇಂದ್ರ ಯಾದವ್ (47) ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಪೊಲೀಸರು ರಾಘವೇಂದ್ರರ ಪತ್ನಿ ಕಿರಣ್ ಯಾದವ್ನನ್ನು (35) ಬಂಧಿಸಿದ್ದು, ಪ್ರೇಯಸಿ ವರ್ಷಾ ಯಾದವ್ (28) ತಲೆಮಾರಿಸಿಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಎಸ್ಎಸ್ಪಿ ಸಂಜಯ್ ವರ್ಮಾ, ದೆಹಲಿಯ ಕಂಪನಿ ಒಂದರಲ್ಲಿ ಇಂಜಿನಿಯರ್ (Engineer) ಆಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಯಾದವ್ಗೆ ಮದುವೆಯಾಗಿ ಓರ್ವ ಮಗನಿದ್ದು, ವರ್ಷಾ ಎಂಬಾಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಯ ಜೊತೆಗಿದ್ದ ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋವನ್ನು ಸೆರೆ ಹಿಡಿದು ತನ್ನ ಪ್ರೇಯಸಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ. ಇದಲ್ಲದೆ ಪತ್ನಿಯ ಮೇಲೆ ಪ್ರತಿನಿತ್ಯ ಹಲ್ಲೆ ನಡೆಸುತ್ತಿದ್ದ. ಇದರಿಂದಾಗಿ ನೊಂದಿದ್ದ ಕಿರಣ್ ಆತನ ಪ್ರೇಯಸಿ ವರ್ಷಾ ಜೊತೆಗೆ ಕೈ ಜೋಡಿಸಿ ರಾಘವೇಂದ್ರನ ಕೊಲೆ ಮಾಡಿದ್ದಾರೆ.
ವಿಚಾರಣೆಯ ವೇಳೆ ಮೃತನ ಪತ್ನಿ ಕಿರಣ್ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ನಡೆದ ದಿನ ರಾತ್ರಿ ರಾಘವೇಂದ್ರ ಪತ್ನಿ ಹಾಗೂ ಪ್ರೇಯಸಿ ಇಬ್ಬರನ್ನು ಕಾರ್ಯಕ್ರಮ ಒಂದಕ್ಕೆ ಕರದುಕೊಂಡು ಹೋಗಿದ್ದ. ಮನೆಗೆ ವಾಪಸ್ ಬಂದ ಬಳಿಕ ಪ್ರೇಯಸಿಯೊಂದಿಗೆ ರೂಮಿನಲ್ಲಿದ್ದ. ಈ ವೇಳೆ ಪತ್ನಿ ರಾಘವೇಂದ್ರ ತಿನ್ನುವ ಆಹಾರದಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸಿ ನೀಡಿದ್ದು, ಆತ ಊಟ ಸೇವಿಸಿದ ಬಳಿಕ ಪ್ರೇಯಸಿಯೊಂದಿಗೆ ಏಕಾಂತದಲ್ಲಿರುವಾಗ ಕಿರಣ್ ದಾಳಿ ಮಾಡಿದ್ದು, ಆಕೆಗೆ ವರ್ಷಾ ಸಾಥ್ ನೀಡಿದ್ದಾಳೆ. ಬಳಿಕ ಇಬ್ಬರು ಸೇರಿ ಆತನನ್ನು ಕೊಲೆ ಮಾಡಿದ್ದು, ಹಾಸಿಗೆ ಮೇಲೆಯೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಆರಂಭದಲ್ಲಿ ಇದು ಶಾರ್ಟ್ ಸರ್ಕ್ಯೂಟ್ ಎಂದು ಭಾವಿಸಿದ್ದೆವು. ಆದರೆ, ಮೃತನ ಮಗ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಇದು ಕೊಲೆ ಎಂದು ಸಾಬೀತಾಗಿದ್ದು, ಕಿರಣ್ ಹಾಗೂ ವರ್ಷಾ ಪಾತ್ರವಿರುವುದು ಬೆಳಕಿಗೆ ಬಂದಿದೆ. ಕಿರಣ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ವರ್ಷಾ ತಲೆಮಾರಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ವಿಚಾರಣೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ಶೀಘ್ರದಲ್ಲೇ ನೀಡಲಾಗುವುದು ಎಂದು ಎಸ್ಎಸ್ಪಿ ಸಂಜಯ್ ವರ್ಮಾ ತಿಳಿಸಿದ್ದಾರೆ.