

ಶಿವಮೊಗ್ಗ: ಮಾವನ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸೊಸೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈಕೆಯ ಗಂಡನೇ ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟಿದ್ದಾಳೆ.
ಇಲ್ಲಿನ ಮಲ್ಲಿಕಾರ್ಜುನ ನಗರದಲ್ಲಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಫಾತಿಮಾ (24) ಮೃತಪಟ್ಟಿದ್ದಾಳೆ. ಗುಜರಿ ವ್ಯಾಪಾರಿ ಸೈಯದ್ ಫರ್ವೇಜ್ (26) ಜತೆ 5 ವರ್ಷದ ಹಿಂದೆ ಫಾತಿಮಾಳ ಮದುವೆ ಆಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಫಾತಿಮಾಳ ತವರು ಮನೆಯಲ್ಲೇ ದಂಪತಿ ವಾಸವಿದ್ದರು.
ಈ ನಡುವೆ ಫಾತಿಮಾಳ ಮನೆಗೆ ಸೈಯದ್ನ ತಂದೆ ಬಂದು ಹೋಗುತ್ತಿದ್ದ. ಮಗ ಕೆಲಸಕ್ಕೆ ಹೋದ ಸಮಯದಲ್ಲಿ ಮಾವ--ಸೊಸೆ ನಡುವೆ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಈ ಬಗ್ಗೆ ಅಕ್ಕಪಕ್ಕದವರು ಸೈಯದ್ ಗಮನಕ್ಕೆ ತಂದಿದ್ದರು. ಪತ್ನಿ ಮೇಲೆ ಅನುಮಾನಗೊಂಡ ಸೈಯದ್ ನಿಗಾ ಇರಿಸಿದ್ದ. ಅಲ್ಲದೆ ತನ್ನ ತಂದೆ ಜತೆಗಿನ ಸಲುಗೆ ನಿಲ್ಲಿಸುವಂತೆಯೂ ಬುದ್ಧಿ ಹೇಳಿದ್ದ. ಆದರೂ ಆಕೆ ಕೇಳಿರಲಿಲ್ಲ ಎನ್ನಲಾಗಿದೆ.
ಇದೇ ವಿಚಾರವಾಗಿ ಕುಪಿತಗೊಂಡ ಸೈಯದ್ ಭಾನುವಾರ ರಾತ್ರಿ ಚಾಕುವಿನಿಂದ ಫಾತಿಮಾಗೆ ಇರಿದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು 2 ಗಂಟೆಯೊಳಗೆ ತುಂಗಾ ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.