ಪತ್ನಿ ಕಿರುಕುಳ, ವಿಡಿಯೋ ಮಾಡಿ ಪತಿ ಆತ್ಮಹತ್ಯೆ

ವಿಜಯವಾಣಿ (6)
Published on

ಬೆಂಗಳೂರಿನ ಟೆಕ್ಕಿ ಪ್ರಕರಣ ನಂತರ ರಾಜ್​ಕೋಟ್​ನಲ್ಲಿ ಇಂಥದೇ ಘಟನೆ

ರಾಜ್​ಕೋಟ್: ಪತ್ನಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಇಂತಹ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಗುಜರಾತ್​ನ ವ್ಯಕ್ತಿಯೊಬ್ಬರು ಪತ್ನಿಯ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಜರಾತ್​ನ ಬೋಟಾಡ್ ಜಿಲ್ಲೆಯ ಜಮರಾಲಾ ಗ್ರಾಮದ ಸುರೇಶ್ ಸಥಾಡಿಯಾ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದ ವಿಡಿಯೋ ಪತ್ತೆಯಾಗಿದೆ. ಆ ವಿಡಿಯೋದಲ್ಲಿ ಪತ್ನಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪತ್ನಿಗೆ ತಕ್ಕ ಬುದ್ಧಿ ಕಲಿಸಿ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುರೇಶ್ ತಂದೆ ಬಾಬು ಸಥಾಡಿಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಭಾರತೀಯ ನೀತಿ ಸಂಹಿತೆಯ ಸೆಕ್ಷನ್ 108ರ ಅಡಿಯಲ್ಲಿ ಕೇಸ್ ದಾಖಿಸಿಕೊಂಡು ಆತ್ಮಹತ್ಯೆಗೆ ಪ್ರಚೋಚನೆ ನೀಡಿದ ಆರೋಪದಲ್ಲಿ ಸುರೇಶ್ ಪತ್ನಿಯನ್ನು ಬಂಧಿಸಿದ್ದಾರೆ.

ತವರಿನಿಂದ ವಾಪಸ್ ಬರಲಿಲ್ಲ

17 ವರ್ಷದ ಹಿಂದೆ ಸುರೇಶ್ ಮದುವೆಯಾಗಿತ್ತು. ದಂಪತಿಗೆ 15 ಮತ್ತು 10 ವರ್ಷದ ಇಬ್ಬರು ಪುತ್ರಿಯರು ಹಾಗೂ 6 ಮತ್ತು 4 ವರ್ಷದ ಪುತ್ರರು ಸೇರಿ 4 ಮಕ್ಕಳಿದ್ದಾರೆ. ಸುರೇಶ್ ಪತ್ನಿ ಜಗಳವಾಡಿ ಆಗಾಗ್ಗೆ ತನ್ನ ತವರು ಮನೆಗೆ ಹೋಗುತ್ತಿದ್ದರು. ಈ ಬಾರಿಯೂ ಆಕೆ ತವರು ಮನೆಗೆ ಹೋಗಿದ್ದರು. ಆಕೆ ವಾಪಸ್ ಬರಲು ಒಪ್ಪದಿದ್ದಾಗ ನಿರಾಸೆಯಿಂದ ಮನೆಗೆ ಮರಳಿದ್ದ ಸುರೇಶ್ ವಿಡಿಯೋ ರೆಕಾರ್ಡ್ ಮಾಡಿ ‘ನನ್ನ ಪತ್ನಿ ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುವಂತಹ ಬುದ್ಧಿ ಕಲಿಸಿ. ಆಕೆ ನನಗೆ ಮೋಸ ಮಾಡಿದ್ದಾಳೆ. ನಾನು ಸಾಯುವಂತೆ ಮಾಡಿದ್ದಾಳೆ’ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಬೇಕರಿ ಮಾಲೀಕರೊಬ್ಬರೂ ಸಹ ಪತ್ನಿಯ ಕಿರುಕುಳದ ಕುರಿತು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 1 ತಿಂಗಳ ಹಿಂದೆ ಬೆಂಗಳೂರಿನ ಟೆಕ್ಕಿ ಅತುಲ್ ಪತ್ನಿಯ ಕಿರುಕುಳದ ಕುರಿತು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅತುಲ್ ಆತ್ಮಹತ್ಯೆ ಸುದ್ದಿ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net