ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ...

Husband wife fight
Published on

ನವದೆಹಲಿ: ವಿಮಾನ ಏರಲು ಹೊರಟಿರುವ ಮಹಿಳೆಯೊಬ್ಬರ ಹ್ಯಾಂಡ್ ಬ್ಯಾಗ್​ನಲ್ಲಿ ಬಾಂಬ್​ ಇದೆ. ಕೂಡಲೇ ಅವರನ್ನು ತಡೆಯಿರಿ ಎಂಬ ಕರೆಯೊಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಭಾರಿ ತಲ್ಲಣವನ್ನೇ ಸೃಷ್ಟಿಸಿತ್ತು.

ಗುರುಗ್ರಾಮದಲ್ಲಿರುವ ದೆಹಲಿ ಏರ್​ಪೋರ್ಟ್​ನ ಕಾಲ್​ಸೆಂಟರ್​ಗೆ ಮಂಗಳವಾರ ಸಂಜೆ 5.45ಕ್ಕೆ ಕರೆ ಬಂದಿತ್ತು. ಕೂಡಲೇ ಸೆಂಟ್ರಲ್​ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್​(ಸಿಐಎಸ್​ಎಫ್​)ನ ಬಾಂಬ್​ ನಿಷ್ಕ್ರಿಯ ದಳ ಕಾರ್ಯ ಪ್ರವೃತ್ತವಾಗಿದ್ದು ವಿಮಾನ ನಿಲ್ದಾಣದ ಭುವನೇಶ್ವರಕ್ಕೆ ತೆರಳುವ ಟರ್ಮಿನಲ್ 3ರಲ್ಲಿ ಶೋಧ ನಡೆಸಿತ್ತು. ಮಹಿಳೆಯ ಹೆಸರು ಮೊದಲೇ ಹೇಳಿದ ಕಾರಣ ವಿಮಾನ ಏರಲು ಹೊರಟಿದ್ದ ಆ ಮಹಿಳೆಯನ್ನು ಸಿಐಎಸ್​ಎಫ್​ ತಂಡ ವಶಕ್ಕೆ ತೆಗೆದುಕೊಂಡು ಅವರ ಹ್ಯಾಂಡ್​ ಬ್ಯಾಗ್ ಪರಿಶೀಲಿಸಿತ್ತು.

ಹ್ಯಾಂಡ್ ಬ್ಯಾಗ್​ನಲ್ಲಿ ಬಾಂಬ್​ ಇರಲಿಲ್ಲ. ಇದನ್ನು ಖಚಿತ ಪಡಿಸಿಕೊಂಡು ಅದೊಂದು ಹುಸಿ ಕರೆ ಎಂಬ ತೀರ್ಮಾನಕ್ಕೆ ಬಂದ ಸಿಐಎಸ್​ಎಫ್​ ತಂಡ ವಿಚಾರಣೆ ಮುಂದುವರಿಸಿತು. ಮಹಿಳೆಯ ಬ್ಯಾಗ್​ನಲ್ಲಿ ಬಾಂಬ್​ ಇದೆ ಎಂದು ಕರೆ ಮಾಡಿದ ವ್ಯಕ್ತಿ ಆಕೆಯ ಪತಿಯೇ ಆಗಿದ್ದ. ಹೆಚ್ಚಿನ ವಿಚಾರಣೆ ವೇಳೆ ಕುತೂಹಲಕಾರಿ ಅಂಶ ಬಹಿರಂಗವಾಯಿತು.

ಪತ್ನಿ ಭುವನೇಶ್ವರಕ್ಕೆ ಹೊರಟಿದ್ದಳು. ಮನೆಯಿಂದ ಹೊರಡುವ ಮುನ್ನ ಪತಿಯೊಂದಿಗೆ ಜಗಳವಾಡಿದ್ದಳು. ಆಕೆಯನ್ನು ಭುವನೇಶ್ವರಕ್ಕೆ ಹೋಗದಂತೆ ತಡೆಯಲು ಆ ಪತಿ ಇನ್ನಿಲ್ಲದ ಪ್ರಯತ್ನ ಮಾಡಿದ್ದ. ಇದಾವುದನ್ನೂ ಲೆಕ್ಕಿಸದೇ ಆಕೆ ಮನೆ ಬಿಟ್ಟು ಬಂದು ವಿಮಾನ ಏರಲು ಹೊರಟಿದ್ದಳು. ಹತಾಶಗೊಂಡ ಪತಿಗೆ ಹೊಳೆಯಿತು ಕತರ್​ನಾಕ್ ಐಡಿಯಾ. ಕೂಡಲೇ ಗುರುಗ್ರಾಮದಲ್ಲಿರು ಏರ್​ಪೋರ್ಟ್​ ಕಾಲ್​ಸೆಂಟರ್​ಗೆ ಕರೆ ಮಾಡಿ ಹೇಳಿದ- ನೋಡಿ.. "----" ಈ ಹೆಸರಿನ ಮಹಿಳೆ ಭುವನೇಶ್ವರಕ್ಕೆ ಹೋಗುವ ವಿಮಾನ ಏರುತ್ತಿದ್ದಾಳೆ. ಆಕೆಯ ಹ್ಯಾಂಡ್​ಬ್ಯಾಗ್​ನಲ್ಲಿ ಬಾಂಬ್​ ಇದೆ ಹುಷಾರ್​!.

ಈ ಬೆದರಿಕೆ ಕರೆ ಸ್ವೀಕರಿಸಿದವರು ಕೂಡಲೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯನ್ನು ಅಲರ್ಟ್​ ಮಾಡಿದರು. ಸಂಜೆ 5.45ಕ್ಕೆ ಕರೆ ಬಂದ ಕೂಡಲೇ ಆಕೆಯನ್ನು ವಿಮಾನ ಏರದಂತೆ ತಡೆದರು. ಆಕೆಯ ಹ್ಯಾಂಡ್ ಬ್ಯಾಗ್​ ನಿಯತವಾಗಿ ಪರಿಶೀಲಿಸಲ್ಪಟ್ಟಿದ್ದು ಅದರಲ್ಲಿ ಸ್ಪೋಟಕಗಳು ಪತ್ತೆಯಾಗಿರಲಿಲ್ಲ. ಬೆದರಿಕೆ ಕರೆ ಬಂದ ಕಾರಣ ಮತ್ತೊಮ್ಮೆ ಭದ್ರತಾ ತಪಾಸಣೆಗಾಗಿ ಆಕೆಯನ್ನು ವಶಕ್ಕೆ ಪಡೆದು ಪರಿಶೀಲಿಸಲಾಯಿತು. ಸ್ಫೋಟಕ ಇಲ್ಲದಿರುವುದನ್ನು ಖಾತರಿಪಡಿಸಿಕೊಂಡು 6.45ಕ್ಕೆ ವಿಮಾನ ಏರಲು ಅವಕಾಶ ಮಾಡಿಕೊಡಲಾಗಿತ್ತು. ಈಗ ಪತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net