

ನವದೆಹಲಿ: ಪತಿಯನ್ನು ಪತ್ನಿ ಬಹಿರಂಗವಾಗಿ ಅವಮಾನಿಸುವುದು ಹಾಗೂ ಆತನ ಕಚೇರಿಯಲ್ಲಿ ಒಬ್ಬ ‘ಹೆಣ್ಣುಬಾಕ’ ಎಂದು ಅವಮಾನಿಸುವುದು ತೀವ್ರ ಹಿಂಸೆಗೆ ಸಮನಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ವಿವಾಹಿತ ದಂಪತಿಗೆ ನೀಡಿದ್ದ ವಿಚ್ಛೇದನವನ್ನು ಎತ್ತಿ ಹಿಡಿಯುವ ತೀರ್ಪಿನಲ್ಲಿ ಕೋರ್ಟ್ ಈ ನಿಲುವನ್ನು ವ್ಯಕ್ತಪಡಿಸಿದೆ. ದಂಪತಿಯಲ್ಲಿ ಯಾರೇ ಒಬ್ಬರು ಇನ್ನೊಬ್ಬರ ವಿರುದ್ಧ ಆಧಾರರಹಿತ ಆರೋಪ ಮಾಡಿ ಅವಮಾನಿಸಿ ವ್ಯಕ್ತಿತ್ವಕ್ಕೆ ಕುಂದುಂಟು ಮಾಡುವುದು ತೀವ್ರ ಹಿಂಸೆಗೆ ಸಮನಾಗುತ್ತದೆ ಎಂದು ಅದು ಹೇಳಿದೆ. ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಇದ್ದ ನ್ಯಾಯಪೀಠವು ಪರಸ್ಪರ ವಿಶ್ವಾಸ, ನಂಬಿಕೆ ಮತ್ತು ಗೌರವವು ವೈವಾಹಿಕ ಜೀವನದ ಮೂಲಭೂತ ಆಧಾರಸ್ತಂಭಗಳಾಗಿವೆ ಎಂದು ಪ್ರತಿಪಾದಿಸಿದೆ.
ದಂಪತಿಯಲ್ಲಿ ಯಾರೊಬ್ಬರೂ ಇನ್ನೊಬ್ಬರನ್ನು ಅಗೌರವಿಸಬಾರದು. ಇಬ್ಬರೂ ಪರಸ್ಪರರ ವ್ಯಕ್ತಿತ್ವ ಮತ್ತು ಘನತೆ ರಕ್ಷಿಸಲು ಕೆಲಸ ಮಾಡಬೇಕು. ಅದರಲ್ಲೂ ವಿಶೇಷವಾಗಿ, ಬಿಕ್ಕಟ್ಟಿನ ಸಮಯದಲ್ಲಿ ಇದು ತುಂಬಾ ಅಗತ್ಯ ಎಂದು ಕೋರ್ಟ್ ಹೇಳಿದೆ. ದುರದೃಷ್ಟವಶಾತ್, ಪ್ರಸಕ್ತ ಪ್ರಕರಣದಲ್ಲಿ ಹೆಂಡತಿಯೇ ಗಂಡನನ್ನು ಸಾರ್ವಜನಿಕವಾಗಿ ಅವಮಾನಿಸಿ ಕಿರುಕುಳ ನೀಡಿದ್ದಾಳೆ. ಕಚೇರಿಯಲ್ಲೇ ಎಲ್ಲರ ಮುಂದೆ ಪತಿ ವಿರುದ್ಧ ದಾಂಪತ್ಯದ್ರೋಹದ ಆರೋಪ ಮಾಡುವ ಮಟ್ಟಕ್ಕೂ ಹೋಗಿದ್ದಾಳೆ. ಪತಿಯ ಕಚೇರಿಯ ಮಹಿಳಾ ಕಾರ್ವಿುಕರಿಗೂ ಕಿರುಕುಳ ನೀಡುತ್ತಿದ್ದಳು. ಆತ ಹೆಣ್ಣುಬಾಕನೆಂದು ಚಿತ್ರಿಸಲು ಯಾವುದೇ ಅವಕಾಶ ಬಿಡುತ್ತಿರಲಿಲ್ಲ. ಈ ವರ್ತನೆ ಪತಿಗೆ ಕೊಡುವ ಹಿಂಸೆ ಎಂದು ಕೋರ್ಟ್ ಹೇಳಿದೆ.