

Wife Cheats Husband: ಹೆಂಡತಿ ಎಂದರೆ ಬರೀ ಅಡುಗೆ ಮನೆಗೆ ಸೀಮಿತವಲ್ಲ, ಆಕೆಗೂ ಒಂದಿಷ್ಟು ಕನಸು ಮತ್ತು ಆಸೆಗಳಿವೆ ಎಂದು ಅರಿತುಕೊಳ್ಳುವ ಗಂಡ, ತನ್ನ ಹೆಂಡತಿಯ ಗುರಿಗಳನ್ನು ಪೂರೈಸಲು ಶ್ರಮಿಸುತ್ತಾನೆ. ಆದರೆ, ಕೆಲವರು ಗುರಿ ತಲುಪಿದ ಬಳಿಕ ತಮ್ಮ ನಿಜ ರೂಪವನ್ನು ತೋರಿಸಿಬಿಡುತ್ತಾರೆ. ಹತ್ತಿದ ಏಣಿಯನ್ನು ಒದೆಯುವಂತೆ ಗುರಿ ತಲುಪಿದಾಗ ಗಂಡನ ಕಷ್ಟ ಅರಿವಾಗುವುದಿಲ್ಲ. ತಮಗೆ ಬೇಕಾಗಿದ್ದನ್ನು ಪಡೆದ ಬಳಿಕ ಗಂಡನಿಗೆ ಮೋಸ ಮಾಡುತ್ತಾರೆ.
ಉತ್ತರ ಪ್ರದೇಶದ ಜ್ಯೋತಿ ಮೌರ್ಯ ಪ್ರಕರಣ ನಿಮಗೆ ನೆನಪಿರಬಹುದು. ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿದು ಪತ್ನಿಯನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಾಡಿದ ಗಂಡನಿಗೆ ಕೊನೆಗೆ ಆಕೆ ಮೋಸ ಮಾಡಿದಳು. ಈ ಸುದ್ದಿ ಈ ಹಿಂದೆ ಭಾರಿ ಸಂಚಲನವೇ ಮೂಡಿಸಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಆದರೆ, ಈ ಬಾರಿ ಉತ್ತರ ಪ್ರದೇಶದಲ್ಲಲ್ಲ ಬಿಹಾರದಲ್ಲಿ.
ಬಿಹಾರದ ಗಯಾ ಮೂಲದ ಪ್ರೀತಿ ಕುಮಾರಿ ಎಂಬಾಕೆಯ ಕಥೆ ಈಗ ಚರ್ಚೆಯ ವಿಷಯವಾಗಿದೆ. ಗಯಾದ ಶೇರ್ಘಾಟಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಂಪುರ ಪಂಚಾಯತಿಯ ಭುಜೌಲ್ ಗ್ರಾಮದ ನಿವಾಸಿ ಮಿಥಿಲೇಶ್ ಅವರು 2017ರಲ್ಲಿ ಜಾರ್ಖಂಡ್ನ ಹಂಟರ್ಗಂಜ್ ಮೂಲದ ಪ್ರೀತಿ ಕುಮಾರಿಯನ್ನು ವಿವಾಹವಾದರು. ದಂಪತಿಗೆ ಒಂದು ಮಗು ಕೂಡ ಇದೆ. ಮಿಥಿಲೇಶ್ ಅವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪತ್ನಿಗೆ ಪೊಲೀಸ್ ಆಗಬೇಕೆಂಬ ಆಸೆ ಇತ್ತು. ಈ ವಿಚಾರವನ್ನು ಪತಿಗೆ ತಿಳಿಸಿದಾಗ ಆತ ಆಕೆಯ ಆಸೆಯನ್ನು ಈಡೇರಿಸಲು ಕೋಚಿಂಗ್ ಕ್ಲಾಸ್ಗೆ ಸೇರಿಸಿದನು. ನಿರೀಕ್ಷೆಯಂತೆ ಆಕೆಗೆ ಪೊಲೀಸ್ ಕಾನ್ಸ್ಟೆಬಲ್ ಕೆಲಸ ಕೂಡ ಸಿಕ್ಕಿತು. ಹೆಂಡತಿ ತನ್ನ ನಂಬಿಕೆಗೆ ದ್ರೋಹ ಮಾಡಲಿಲ್ಲ ಎಂದು ಪತಿ ಸಂತೋಷಡುತ್ತಿದ್ದ. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಸರ್ಕಾರಿ ನೌಕರಿ ಸಿಕ್ಕ ನಂತರ ಪತ್ನಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಕೆಲಸದ ನಿಮಿತ್ತ ದೂರದಲ್ಲಿರುವ ತನ್ನ ಹೆಂಡತಿಗೆ ಎಷ್ಟು ಬಾರಿ ಕರೆ ಮಾಡಿದರೂ ಆಕೆ ಫೋನ್ ತೆಗೆಯುತ್ತಿರಲಿಲ್ಲ. ಭೇಟಿಯಾಗಲು ಕೂಡ ಇಷ್ಟಪಡುತ್ತಿರಲಿಲ್ಲ.
ಇದರಿಂದ ಹತಾಶೆಗೊಂಡ ಮಿಥಿಲೇಶ್ ಗಯಾದ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ತನ್ನ ಹೆಂಡತಿಯನ್ನು ತನ್ನ ಬಳಿಗೆ ಕಳುಹಿಸಲು ಕೇಳಿದರು. ನಾನು ತುಂಬಾ ಕಷ್ಟಪಟ್ಟು ಓದಿಸಿದ್ದೇನೆ ಮತ್ತು ಆಕೆಗೆ ಉದ್ಯೋಗ ಕೊಡಿಸಲು ಸಾಕಷ್ಟು ತ್ಯಾಗ ಮಾಡಿದ್ದೇನೆ. ಆದರೆ, ಕೆಲಸ ಸಿಕ್ಕಿದ ನಂತರ ಅವಳು ನನ್ನನ್ನು ತೊರೆದಿದ್ದಾಳೆ. ನನ್ನ ಕರೆಗಳಿಗೆ ಉತ್ತರಿಸುತ್ತಿಲ್ಲ. ದಯವಿಟ್ಟು ನನ್ನ ಹೆಂಡತಿಯನ್ನು ನನ್ನ ಬಳಿಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು ಈ ಕಥೆಯಲ್ಲಿ ಒಂದು ಟ್ವಿಸ್ಟ್ ಕೂಡ ಬಹಿರಂಗವಾಗಿದೆ. ಮಿಥಿಲೇಶ್ ಅವರು ಪ್ರೀತಿ ಕುಮಾರಿಯ ಎರಡನೇ ಪತಿ. ಪ್ರೀತಿಗೆ 2012 ರಲ್ಲಿ ಮದುವೆಯಾಗಿತ್ತು ಮತ್ತು ವಿಚ್ಛೇದನ ಪಡೆದಿದ್ದಾರೆ. ಇದಾದ ನಂತರ ಮಿಥಿಲೇಶ್, ಪ್ರೀತಿಯ ಜೀವನಕ್ಕೆ ಕಾಲಿಟ್ಟರು. ಇಬ್ಬರು 2017 ರಲ್ಲಿ ವಿವಾಹವಾದರು. ಇದಾದ ಬಳಿಕ ಆಕೆಯನ್ನು ಕಾನ್ಸ್ಟೆಬಲ್ ಮಾಡಲು ಮಿಥಿಲೇಶ್ ಹೆಣಗಾಡಿದರು.
ಇನ್ನು ಪ್ರೀತಿ ಕುಮಾರಿ ಹೇಳೋದೆ ಬೇರೆ. ಪತಿ ತನಗೆ ಚಿತ್ರಹಿಂಸೆ ನೀಡುತ್ತಿದ್ದ ಮತ್ತು ನನ್ನ ಎಟಿಎಂ ಕಾರ್ಡ್ ತೆಗೆದುಕೊಂಡು, ಹಣ ಡ್ರಾ ಮಾಡಿ ಶೋಕಿ ಮಾಡುತ್ತಿದ್ದ. ಅಲ್ಲದೆ, ವರದಕ್ಷಿಣೆಗಾಗಿ ನನಗೆ ಕಿರುಕುಳ ಸಹ ನೀಡುತ್ತಿದ್ದ ಎಂದು ಆರೋಪಿಸಿರುವ ಪ್ರೀತಿ, ಇನ್ನು ಮುಂದೆ ಮಿಥಿಲೇಶ್ ಜತೆ ಬದುಕುವುದು ಬೇಡ ಎಂದು ನಿರ್ಧರಿಸಿದ್ದಾಳಂತೆ. ಈ ಪ್ರಕರಣದಲ್ಲಿ ಉನ್ನತ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)