

ಲಖನೌ: ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿದು ಪತ್ನಿಯನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಾಡಿ, ಇದೀಗ ಪತ್ನಿಯ ವಿರುದ್ಧ ದಾಂಪತ್ಯ ದ್ರೋಹ ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರ ಬಿದ್ದಿದೆ. ಪತ್ನಿಯು ವ್ಯಕ್ತಿಯೊಬ್ಬರ ಜತೆ ಮಾತನಾಡಿರುವ ಕಾಲ್ ರೆಕಾರ್ಡ್ಸ್ ಮತ್ತು ವಾಟ್ಸ್ಆ್ಯಪ್ ಚಾಟ್ ಸ್ಕ್ರೀನ್ಶಾಟ್ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಬರೇಲಿ ಜಿಲ್ಲೆಯ ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿ ಆಗಿರುವ ಜ್ಯೋತಿ ಮೌರ್ಯ, ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ಗಂಡನ ದುಡಿಮೆಯಲ್ಲಿ ಓದಿ, ಸರ್ಕಾರಿ ಕೆಲಸ ಗಿಟ್ಟಿಸಿ, ಬೇರೊಬ್ಬನ ಜತೆ ಅಕ್ರಮ ಸಂಬಂಧ ಹೊಂದುವ ಮೂಲಕ ದ್ರಾಪಂತ್ಯಕ್ಕೆ ವಂಚನೆ ಎಸಗಿದ್ದಲ್ಲದೆ, ನಂಬಿಕೆ ದ್ರೋಹ ಮಾಡಿರುವ ಆರೋಪ ಜ್ಯೋತಿ ಮೌರ್ಯ ವಿರುದ್ಧ ಕೇಳಿಬಂದಿದೆ.
ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಜ್ಯೋತಿ ಮೌರ್ಯ ಮತ್ತು ಅವರ ಬಾಯ್ಫ್ರೆಂಡ್ ನಡುವಿನ ವಾಟ್ಸಾಪ್ ಚಾಟ್‌ಗಳು ತುಂಬಾ ಟ್ರೋಲ್ ಆಗುತ್ತಿವೆ. ಜ್ಯೋತಿ ಮೌರ್ಯ ತನ್ನ ಗೆಳೆಯನ ಜತೆ ವಾಟ್ಸ್ಆ್ಯಪ್ನಲ್ಲಿ ಸುದೀರ್ಘ ಸಂಭಾಷಣೆ ನಡೆಸಿದ್ದು, ಇದನ್ನು ಜ್ಯೋತಿ ಮೌರ್ಯ ಪತಿಯೇ ಆನ್ಲೈನ್ನಲ್ಲಿ ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಜ್ಯೋತಿ ಮೌರ್ಯ ಅವರಿಗೆ ಸೇರಿದ್ದೆಂದು ಹೇಳಲಾದ ಡೈರಿಯ ಪುಟಗಳ ಫೋಟೋಗಳು ಸಹ ವೈರಲ್ ಆಗಿವೆ. ಈ ಪುಟಗಳು ಉದ್ದೇಶಪೂರ್ವಕವಾಗಿ ಲಂಚದ ವಹಿವಾಟುಗಳ ವಿವರಗಳನ್ನು ಬಹಿರಂಗಪಡಿಸಿವೆ. ಇದು ಜ್ಯೋತಿಯ ವೈಯಕ್ತಿಕ ಜೀವನ ಮತ್ತು ಎಸ್ಡಿಎಂ ಆಗಿ ಅವರ ವೃತ್ತಿಪರ ಕರ್ತವ್ಯಗಳ ನಡುವಿನ ಕೆಲ ಸಂಪರ್ಕಗಳನ್ನು ಬಹಿರಂಗಪಡಿಸಿದೆ. ಪುಟಗಳಲ್ಲಿ ಉಲ್ಲೇಖವಾಗಿರುವ ಸಂಗತಿ ನಿಜವಾಗಿದ್ದರೆ, ಇದು ಜ್ಯೋತಿ ಮೌರ್ಯ ಅವರಿಗೆ ತೀವ್ರ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ.
ಇದರ ನಡುವೆ ಜ್ಯೋತಿ ಮೌರ್ಯ ಮತ್ತು ಪತಿಯ ನಡುವಿನ ಸಂಭಾಷಣೆ ಒಳಗೊಂಡಿರುವ ಆಡಿಯೋ ಕ್ಲಿಪ್ ಒಂದು ಹೊರಹೊಮ್ಮಿದ್ದು, ಸಂಭಾಷಣೆಯಲ್ಲಿ ಆಕೆಯ ಪ್ರಿಯಕರನೊಂದಿಗಿನ ಭೇಟಿಯ ಬಗ್ಗೆ ವಾಗ್ದಾದ ನಡೆಸಿದ್ದಾರೆ ಎನ್ನಲಾಗಿದೆ. ಈ ಆಡಿಯೋ ಕ್ಲಿಪ್ ಅಕ್ರಮ ಸಂಬಂಧವನ್ನು ಖಾತರಿಪಡಿಸುವಂತಿದೆ.
ಜ್ಯೋತಿ ಮೌರ್ಯ ಮತ್ತು ಅಲೋಕ್ 2010ರಲ್ಲಿ ಮದುವೆ ಆದರು. ಆ ಸಮಯದಲ್ಲಿ ಅಲೋಕ್ ಪಂಚಾಯತ್ ರಾಜ್ ಇಲಾಖೆಯಲ್ಲಿ 4ನೇ ವರ್ಗದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ಜ್ಯೋತಿ ಓದು ಮುಂದುವರಿಸುವ ಬಯಕೆಯನ್ನು ಗಂಡನ ಬಳಿ ವ್ಯಕ್ತಪಡಿಸಿದ್ದರು. ಬಳಿಕ ಅಲೋಕ್ ಕೂಡ ಇದಕ್ಕೆ ಓಕೆ ಎಂದಿದ್ದರು. ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೆವು. ಆದರೆ, ನಾನು ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ ಕೊಡಿಸಿದೆ. ಪ್ರಯಾಗ್ರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ದಾಖಲಿಸಿದೆ. ತನ್ನ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಳು. ಯಶಸ್ಸನ್ನು ತಲೆಗೆ ತುಂಬಿಸಿಕೊಂಡ ಪತ್ನಿ ನನಗೆ ವಂಚನೆ ಮಾಡಲು ಮುಂದಾದಳು ಎಂದು ಅಲೋಕ್ ಆರೋಪಿಸಿದ್ದಾರೆ.
2023ರ ಮೇ 7ರಂದು ತನ್ನ ಮಾವ ಮತ್ತು ಗಂಡನ ವಿರುದ್ಧ ಜ್ಯೋತಿ ಮೌರ್ಯ ವರದಕ್ಷಿಣೆ ಕಿರುಕುಳ ದಾಖಲಿಸಿದರು. ಫಾರ್ಚೂನರ್ ಕಾರು ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಜ್ಯೋತಿ ಉಲ್ಲೇಖಿಸಿದ್ದರು. ಅಲ್ಲದೆ, ಗಂಡನನ್ನು ಜೈಲಿಗೆ ಕಳುಹಿಸಿದ್ದು, ಇದೀಗ ಅಲೋಕ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಮತ್ತು ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದರಿಂದ ಸಂಕಷ್ಟಕ್ಕಿಡಾಗಿದ್ದು, ಮಾಧ್ಯಮಗಳ ಮುಂದೆ ಅಲೋಕ್ ಕಣ್ಣೀರಿಟ್ಟಿದ್ದಾರೆ.
ಇದೀಗ ಅಲೋಕ್ ಮೌರ್ಯ ಕೂಡ ತನ್ನ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ಕಾವಲು ಪಡೆಯ ಕಮಾಂಡರ್ ಮನೀಶ್ ದುಬೆ ಎಂಬುವರ ಜತೆ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ. ಜ್ಯೋತಿ ತನ್ನ ಅಧಿಕೃತ ನಿವಾಸದಲ್ಲಿ ಮನೀಶ್ ಜೊತೆ ಸರಸ ಸಲ್ಲಾಪದಲ್ಲಿ ತೊಗಿದ್ದಳು. ಇದನ್ನು ನಾನು ಕಣ್ಣಾರೆ ಕಂಡೆ ಎಂದು ದೂರಿದ್ದಾರೆ. ನನಗೆ ಜ್ಯೋತಿ ಕಡೆಯಿಂದ ಜೀವಕ್ಕೆ ಬೆದರಿಕೆ ಇದೆ. ಡಿವೋರ್ಸ್ ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲೋಕ್, ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣ ಸಂಬಂಧ ಸದ್ಯ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)