

ಲಖನೌ: ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿದು ಪತ್ನಿಯನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಾಡಿ, ಇದೀಗ ಪತ್ನಿಯ ವಿರುದ್ಧ ದಾಂಪತ್ಯ ದ್ರೋಹ ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರ ಬಿದ್ದಿದೆ. 2016ರಲ್ಲಿ ಪತ್ನಿ ನೀಡಿದ್ದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆರೋಪಕ್ಕೆ ಪುಷ್ಠಿ ನೀಡುವಂತಿದೆ.
ಅಲೋಕ್ ಮೌರ್ಯ ಎಂಬುವರು ತಮ್ಮ ಪತ್ನಿ ಎಸ್ಡಿಎಂ ಜ್ಯೋತಿ ಮೌರ್ಯ ವಿರುದ್ಧ ಆರೋಪ ಮಾಡಿದ್ದಾರೆ. ನನಗೆ ವಂಚನೆ ಮಾಡಿ, ಬೇರೆ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅಲೋಕ್ ಮೌರ್ಯ ಆರೋಪಿಸಿದ್ದು, ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
2016ರಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿದ್ದ ಜ್ಯೋತಿ ಮೌರ್ಯ, ತನ್ನ ಯಶಸ್ಸಿಗೆ ಪತಿ ಅಲೋಕ್ ಮೌರ್ಯ ಮತ್ತು ಮಾವ ಕಾರಣ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದ ವರದಿಯ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಆದರೆ, ಇದೀಗ ಗಂಡ ಮತ್ತು ಮಾವನ ವಿರುದ್ಧವೇ ಜ್ಯೋತಿ ಮೌರ್ಯ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಸ್ಕ್ರೀನ್ಶಾಟ್ ವೈರಲ್ ಆಗಿದ್ದು, ಜ್ಯೋತಿ ಮೌರ್ಯ ವಿರುದ್ಧವೇ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಜನತಾ ದರ್ಬಾರ್ ಸಭೆಯ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ಮಾಡಿ, ತನ್ನ ಪತ್ನಿ ಜ್ಯೋತಿ ಮೌರ್ಯ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಲು ಅಲೋಕ್ ಮೌರ್ಯ ಮುಂದಾಗಿದ್ದಾರೆ. ವಿಭಾಗೀಯ ಮಟ್ಟದ ಕ್ರಮ ಜರುಗಿಸಲು ಸಹ ದೂರು ದಾಖಲಿಸಲಾಗಿದೆ. ಭ್ರಷ್ಟಾಚಾರ ಮಾತ್ರವಲ್ಲದೆ, ಪತ್ನಿ ಮತ್ತು ಆಕೆಯ ಲವರ್ ಜತೆ ನಡೆದಿರುವ ವಾಟ್ಸ್ಆ್ಯಪ್ ಚಾಟ್ ಸ್ಕ್ರೀನ್ಶಾಟ್ ಅನ್ನು ಸಹ ದೂರಿನ ಜತೆ ದಾಖಲಿಸಿದ್ದಾರೆ.
ಜ್ಯೋತಿ ಮೌರ್ಯ ಮತ್ತು ಅಲೋಕ್ 2010ರಲ್ಲಿ ಮದುವೆ ಆದರು. ಆ ಸಮಯದಲ್ಲಿ ಅಲೋಕ್ ಪಂಚಾಯತ್ ರಾಜ್ ಇಲಾಖೆಯಲ್ಲಿ 4ನೇ ವರ್ಗದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ಜ್ಯೋತಿ ಓದು ಮುಂದುವರಿಸುವ ಬಯಕೆಯನ್ನು ಗಂಡನ ಬಳಿ ವ್ಯಕ್ತಪಡಿಸಿದ್ದರು. ಬಳಿಕ ಅಲೋಕ್ ಕೂಡ ಇದಕ್ಕೆ ಓಕೆ ಎಂದಿದ್ದರು. ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೆವು. ಆದರೆ, ನಾನು ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ ಕೊಡಿಸಿದೆ. ಪ್ರಯಾಗ್ರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ದಾಖಲಿಸಿದೆ. ತನ್ನ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಳು. ಯಶಸ್ಸನ್ನು ತಲೆಗೆ ತುಂಬಿಸಿಕೊಂಡ ಪತ್ನಿ ನನಗೆ ವಂಚನೆ ಮಾಡಲು ಮುಂದಾದಳು ಎಂದು ಅಲೋಕ್ ಆರೋಪಿಸಿದ್ದಾರೆ.
2023ರ ಮೇ 7ರಂದು ತನ್ನ ಮಾವ ಮತ್ತು ಗಂಡನ ವಿರುದ್ಧ ಜ್ಯೋತಿ ಮೌರ್ಯ ವರದಕ್ಷಿಣೆ ಕಿರುಕುಳ ದಾಖಲಿಸಿದರು. ಫಾರ್ಚೂನರ್ ಕಾರು ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಜ್ಯೋತಿ ಉಲ್ಲೇಖಿಸಿದ್ದರು. ಅಲ್ಲದೆ, ಗಂಡನನ್ನು ಜೈಲಿಗೆ ಕಳುಹಿಸಿದ್ದು, ಇದೀಗ ಅಲೋಕ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಮತ್ತು ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದರಿಂದ ಸಂಕಷ್ಟಕ್ಕಿಡಾಗಿದ್ದು, ಮಾಧ್ಯಮಗಳ ಮುಂದೆ ಅಲೋಕ್ ಕಣ್ಣೀರಿಟ್ಟಿದ್ದಾರೆ.
ಇದೀಗ ಅಲೋಕ್ ಮೌರ್ಯ ಕೂಡ ತನ್ನ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ಕಾವಲು ಪಡೆಯ ಕಮಾಂಡರ್ ಮನೀಶ್ ದುಬೆ ಎಂಬುವರ ಜತೆ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ. ಜ್ಯೋತಿ ತನ್ನ ಅಧಿಕೃತ ನಿವಾಸದಲ್ಲಿ ಮನೀಶ್ ಜೊತೆ ಸರಸ ಸಲ್ಲಾಪದಲ್ಲಿ ತೊಗಿದ್ದಳು. ಇದನ್ನು ನಾನು ಕಣ್ಣಾರೆ ಕಂಡೆ ಎಂದು ದೂರಿದ್ದಾರೆ. ನನಗೆ ಜ್ಯೋತಿ ಕಡೆಯಿಂದ ಜೀವಕ್ಕೆ ಬೆದರಿಕೆ ಇದೆ. ಡಿವೋರ್ಸ್ ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲೋಕ್, ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣ ಸಂಬಂಧ ಸದ್ಯ ತನಿಖೆ ನಡೆಯುತ್ತಿದ್ದು, ಇದರ ನಡುವೆ 2016ರಲ್ಲಿ ಜ್ಯೋತಿ ಮೌರ್ಯ ನೀಡಿದ್ದ ಹೇಳಿಕೆಯ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)