

ನಂಜನಗೂಡು: ಸಂಸಾರದಲ್ಲಿ ಕಲಹ ಇದ್ದುದ್ದರಿಂದ ಪತಿ ಕೊಲೆ ಮಾಡಲು ಪತ್ನಿಯೇ ಸಂಚು ರೂಪಿಸಿ ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಂಜನಗೂಡು ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಸಂಗೀತಾ (34), ಸಹೋದರ ಸಂಜಯ್ (18), ಸ್ನೇಹಿತ ವ್ನಿೇಶ್ (20) ಹಾಗೂ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಸೋಮವಾರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿವರ: ಅ.25 ರಂದು ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ರಾಜೇಂದ್ರ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಪತ್ನಿ ಸಂಗೀತಾ ಕರೆದೊಯ್ದಿದ್ದಾಳೆ. ನಗರದ ಹುಂಡುವಿನಹಳ್ಳಿ ಬಡಾವಣೆಯ ಮುಡಾ ಲೇಔಟ್ ಬಳಿ ತೆರಳುತ್ತಿದ್ದ ವೇಳೆ ಕಾರೊಂದರಲ್ಲಿ ಬಂದ ನಾಲ್ವರು ಸ್ಕೂಟರ್ ತಡೆದು ಬೀಳಿಸಿ ಜಗಳ ತೆಗೆದಿದ್ದಾರೆ. ನಾಲ್ವರ ಪೈಕಿ ಇಬ್ಬರು ಸಂಗೀತಾ ಅವರ ಕುತ್ತಿಗೆಯಲ್ಲಿ ಇದ್ದ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಹರಿತವಾದ ಆಯುಧದಿಂದ ರಾಜೇಂದ್ರನಿಗೆ ತಿವಿದಿದ್ದಾನೆ. ಕೊಲೆಗೆ ಯತ್ನ ನಡೆಯುತ್ತಿದ್ದ ವೇಳೆ ಎದುರಿನಿಂದ ಬಂದ ವಾಹನದ ಬೆಳಕು ಕಂಡ ತಕ್ಷಣ ಮೂವರು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ರಾಜೇಂದ್ರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಕೊಲೆ ಯತ್ನದ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯ ಪ್ರವೃತ್ತರಾದ ಎಸ್ಪಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್, ಡಿವೈಎಸ್ಪಿ ರಘು ಅವರ ಮಾರ್ಗದರ್ಶನದಲ್ಲಿ ನಂಜನಗೂಡು ಠಾಣೆ ಇನ್‌ಸ್ಪೆಕ್ಟರ್ ರವೀಂದ್ರ, ಪಿಎಸ್‌ಐಗಳಾದ ಕೃಷ್ಣಕಾಂತ ಕೋಳಿ, ಮಂಜುನಾಥ್, ಎಎಸ್‌ಐ ದೇವರಾಜಯ್ಯ ನೇತೃತ್ವದಲ್ಲಿ ಸಿಬ್ಬಂದಿ ಅವರನ್ನೊಳಗೊಂಡ ತಂಡ ರಚಿಸಿ ಘಟನೆ ನಡೆದ ಸ್ಥಳ, ಸಿಸಿ ಕ್ಯಾಮರಾ ದೃಶ್ಯಗಳು ಹಾಗೂ ವೈಜ್ಞಾನಿಕ ಅಂಶಗಳ ನೆರವಿನಿಂದ ತನಿಖೆ ಆರಂಭಿಸಿದ್ದಾರೆ. ಈವೇಳೆ ಪತ್ನಿ ಸಂಗೀತಾಳ ಸಂಚು ಬಯಲಾಗಿದೆ.
ಕೊಲೆ ಯತ್ನಕ್ಕೆ ಸಹೋದರ ಸಂಜಯ್‌ನನ್ನೇ ಸಂಗೀತಾ ಬಳಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ. ಕೊಲೆಗೆ ಸಂಚು ರೂಪಿಸಲು ಕಾರನ್ನ ಬಾಡಿಗೆ ಪಡೆದ ಸಂಜಯ್ ಸ್ನೇಹಿತ ವಿಘ್ನೇಶ್, ಅಪ್ರಾಪ್ತ ಸೇರಿ, ಹತ್ಯೆಗೆ ಸಂಚು ರೂಪಿಸಿದ್ದಾರೆ. ಅ.25ರಂದು ಸಂಜೆ ದಂಪತಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತರಂತೆ ಅಟ್ಯಾಕ್ ಮಾಡಿದ್ದಾರೆ. ಸಂಗೀತಾ ಸಹ ದರೋಡೆ ಪ್ರಕರಣದಂತೆ ನಟಿಸಿದ್ದಾಳೆ. ಡ್ರಾಗರ್‌ನಿಂದ ಚುಚ್ಚಿ ರಾಜೇಂದ್ರ ಅವರನ್ನು ಮುಗಿಸುವ ಯತ್ನ ನಡೆದಿದೆ. ಅಷ್ಟರಲ್ಲಿ ವಾಹನವೊಂದು ಬಂದ ಪರಿಣಾಮ ಹತ್ಯೆ ಸ್ಕೆಚ್ ಮಿಸ್ ಆಗಿದೆ. ಸಂಗೀತಾಳನ್ನ ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಪತಿ ಹತ್ಯೆ ರಹಸ್ಯ ಬಯಲಾಗಿದೆ. ನಂಜನಗೂಡು ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.